ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಎಸ್‌ಐಟಿ ಈವರೆಗೂ ಲಿಖಿತ ವಾದ ಮತ್ತು ಪ್ರಕರಣದ ಸಂಕ್ಷಿಪ್ತ ಸಾರಾಂಶ (ಸಿನಾಪ್ಸಿಸ್) ಸಲ್ಲಿಸದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದನ್ನು ಪ್ರಶ್ನಿಸಿ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್ ಪ್ರಕರಣದ ಎಫ್‌ಐಆರ್ ರದ್ದು ಕೋರಿ ಸಂತ್ರಸ್ತೆ, ಆರೋಪಿಗಳಾದ ಎಸ್. ಶ್ರವಣ್ ಕುಮಾರ್ ಹಾಗೂ ಬಿ.ಎಂ.ನರೇಶ್ ಸಲ್ಲಿಸಿರುವ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಪೀಠ, ಲಿಖಿತ ವಾದ ಹಾಗೂ ಸಿನಾಪ್ಸಿಸ್ ಸಲ್ಲಿಸುವವರೆಗೂ ವಾದ - ಪ್ರತಿವಾದ ಆಲಿಸುವುದಿಲ್ಲ ಎಂದು ತಿಳಿಸಿದೆ.
ವಿಚಾರಣೆ ವೇಳೆ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಿ, ಲಿಖಿತ ವಾದಾಂಶ ಮತ್ತು ಸಿನಾಪ್ಸಿಸ್ ಸಲ್ಲಿಸುವಂತೆ ಪಕ್ಷಕಾರರಿಗೆ (ಅರ್ಜಿದಾರರು ಮತ್ತು ಪ್ರತಿವಾದಿಗಳು) ಸೆ.5 ರಂದು ನ್ಯಾಯಾಲಯ ಸೂಚಿಸಿತ್ತು. ತಮ್ಮ ಕಕ್ಷಿದಾರರ ಪರವಾದ ಲಿಖಿತ ವಾದವನ್ನು ಸಲ್ಲಿಸಲಾಗಿದೆ.