ಕರ್ನಾಟಕ

karnataka

ETV Bharat / state

ಸರ್ಕಾರಿ ಜಮೀನುಗಳ ತೆರವುಗೊಳಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇರುತ್ತದೆ : ಹೈಕೋರ್ಟ್ - Etv Bharat Kannada

ಒತ್ತುವರಿಯಾದ ಸರ್ಕಾರಿ ಜಮೀನು ತೆರವು ಮತ್ತು ನೋಟಿಸ್​ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ- ಹೈಕೋರ್ಟ್​ ನ್ಯಾಯಪೀಠದಲ್ಲಿ ನಡೆದ ವಿಚಾರಣೆ - ರೈತರ ತಕರಾರು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಹೇಳಿಕೆ

high court
ಹೈಕೋರ್ಟ್

By

Published : Jan 30, 2023, 3:30 PM IST

ಬೆಂಗಳೂರು: ಸರ್ಕಾರದ ಜಮೀನುಗಳು ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವುದಕ್ಕಾಗಿ ಒತ್ತುವರಿದಾರರಿಗೆ ನೋಟಿಸ್ ನೀಡುವ ಅಧಿಕಾರ ಜಿಲ್ಲಾಧಿಕಾರಿ ಮಾತ್ರ ಹೊಂದಿರುತ್ತಾರೆ ಎಂದು ಹೈಕೋರ್ಟ್ ತಿಳಿಸಿದೆ. ಸರ್ಕಾರಿ ಒತ್ತುವರಿ ಸಂಬಂಧ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಹಶೀಲ್ದಾರ್ ನೀಡಿದ್ದ ನೋಟಿಸ್ ರದ್ದು ಪಡಿಸುವಂತೆ ಕೋರಿ ಸ್ಥಳೀಯ ಬಾಲಪ್ಪ ಸೇರಿ ಇತರೆ ಎಂಟು ಮಂದಿ ರೈತರು ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ನ್ಯಾಯಪೀಠ, ಒತ್ತುವರಿದಾರರಿಗೆ ನೋಟಿಸ್ ನೀಡುವ ಅಧಿಕಾರ ತಹಶೀಲ್ದಾರ್ ಅವರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 94(3) ಮತ್ತು 39(1) ಅಡಿಯಲ್ಲಿ ಅರ್ಜಿದಾರರಿಗೆ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಸೆಕ್ಷನ್ 39ರ ಪ್ರಕಾರ ಸರ್ಕಾರಿ ಜಮೀನನ್ನು ಯಾರಾದರೂ ಒತ್ತುವರಿ ಮಾಡಿದ್ದರೆ, ಅದನ್ನು ತೆರವು ಮಾಡಬೇಕಾದರೆ ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಆದ್ದರಿಂದ ತೆರವು ಕಾರ್ಯಾಚರಣೆ ಜಿಲ್ಲಾಧಿಕಾರಿ ಮಾತ್ರ ಮಾಡಬೇಕು. ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯೇ ಆದೇಶ ನೀಡಬೇಕು. ಅಲ್ಲದೆ, ತೆರವು ಕಾರ್ಯಾಚರಣೆಗೂ ಮುನ್ನ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಬೇಕು. ಅದನ್ನು ಸ್ವೀಕರಿಸಿದ ನಂತರ ಜಾಗದ ತೆರವಿಗೆ ಕಾಲಾವಕಾಶ ನೀಡಿ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಡಿಸಿ ಅವರೇ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು: ಒತ್ತುವರಿದಾರರು ನೋಟಿಸ್ ಪಾಲಿಸದಿದ್ದರೆ ಜಿಲ್ಲಾಧಿಕಾರಿಯೇ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಇಲ್ಲವೇ ತಮ್ಮ ಅಧೀನದ ಅಧಿಕಾರಿಯನ್ನು ತೆರವು ಕಾರ್ಯಾಚರಣೆಗೆ ನಿಯೋಜಿಸಬೇಕು. ತೆರವು ಕಾರ್ಯಾಚರಣೆ ಕೈಗೊಳ್ಳುವ ಅಧಿಕಾರಿಗೆ ಯಾರಾದರೂ ಅಡ್ಡಿಪಡಿಸಿದರೆ, ಆ ಕುರಿತು ಪ್ರಕರಣದ ಸತ್ಯಾಂಶ ತಿಳಿಯಲು ಜಿಲ್ಲಾಧಿಕಾರಿ ಅಥವಾ ಕಂದಾಯ ಅಧಿಕಾರಿ ವಿಚಾರಣೆ ನಡೆಸಬೇಕು. ಸಕಾರಣವಿಲ್ಲದೆ ಅಧಿಕಾರಿಗೆ ಅಡ್ಡಿಪಡಿಸಿರುವುದು ದೃಢಪಟ್ಟಲ್ಲಿ ಮತ್ತು ಅಡ್ಡಿಪಡಿಸುವ ಕಾರ್ಯ ಮು೦ದುವರಿಸುತ್ತಿದ್ದರೆ, ಅಂತಹವರನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಜಿಲ್ಲಾಧಿಕಾರಿಯು ಸರ್ಕಾರಿ ಜಮೀನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸಲು ಅಧಿಕಾರ ಹೊಂದಿರುತ್ತಾರೆ. ಹಾಗಾಗಿ, ಪ್ರಕರಣದಲ್ಲಿ ಅರ್ಜಿದಾರರಿಗೆ ನೋಟಿಸ್ ನೀಡಲು ರಾಯಭಾಗ ತಹಶೀಲ್ದಾರ್ ಅಧಿಕಾರ ಹೊಂದಿಲ್ಲ. ಅವರು ಸಕ್ಷಮ ಅಧಿಕಾರಿಯೂ ಅಲ್ಲ, ಆದ್ದರಿಂದ 2022 ಡಿಸೆಂಬರ್ 8 ರಂದು ಜಾರಿಗೊಳಿಸಿರುವ ನೋಟಿಸ್ ರದ್ದುಪಡಿಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಸಕ್ಷಮ ಅಧಿಕಾರಿ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು. ಅದಕ್ಕೆ ಈ ಆದೇಶ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಲಕ್ಷ್ಮಣ್ ಟಿ.ಮಂಟಗು ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 39 ಪ್ರಕಾರ ನೋಟಿಸ್ ಜಾರಿ ಮಾಡಲು ತಹಶೀಲ್ದಾರ್​​​ ಅವರಿಗೆ ಸಕ್ಷಮ ಪ್ರಾಧಿಕಾರವಲ್ಲ. ಹಾಗಾಗಿ ಅವರ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿದ್ದರು. ಅದನ್ನು ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ತಹಶೀಲ್ದಾರ್ ನೋಟಿಸ್ ಜಾರಿ ಮಾಡಿರುವುದು ನ್ಯಾಯಸಮ್ಮತವಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ:ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ನೀಡುವ ವರದಿ : ರಿಪೋರ್ಟ್​ ಸಲ್ಲಿಸಲು ಹೈಕೋರ್ಟ್​ಗೆ ಕಾಲಾವಕಾಶ ಕೋರಿದ ಸರ್ಕಾರ

ABOUT THE AUTHOR

...view details