ಬೆಂಗಳೂರು: ಚಿತ್ರದುರ್ಗ ಮುರುಘಾಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಡಿ.ಎಸ್. ಮಲ್ಲಿಕಾರ್ಜುನ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಅಂತಿಮ ತೀರ್ಪು ಕಾಯ್ದಿರಿಸಿದೆ.
ಸಾವಿರಾರು ಕೋಟಿ ಆಸ್ತಿಗಳಿಗೆ ಹಾನಿ:ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮುರುಘಾ ಮಠದ ಪೀಠಾಧಿಪತಿಗಳು, ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜೈಲಿನಿಂದಲೇ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದಾದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಭಾರಿ ಹಾನಿಯುಂಟಾಗಲಿದೆ.
ಶಿವಮೂರ್ತಿ ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್) ಟ್ರಸ್ಟಿ ಮತ್ತು ಅಧ್ಯಕ್ಷರಾಗಿದ್ದಾರೆ. 2010ರ ನವೆಂಬರ್ 26ರಂದು ಟ್ರಸ್ಟ್ ಡೀಡ್ ನಿಗದಿಪಡಿಸಲಾಗಿದೆ. ಇದರಂತೆ ಮಠ ಮತ್ತು ವಿದ್ಯಾಪೀಠಗಳ ಆಡಳಿತದಲ್ಲಿ ಸಂಪೂರ್ಣ ಅವರು ಅಧಿಕಾರ ಹೊಂದಿದ್ದಾರೆ. ವಿದ್ಯಾಪೀಠದ ಅಡಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ 106 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.
ಇದನ್ನೂ ಓದಿ:ಮುರುಘಾ ಮಠ ಟ್ರಸ್ಟ್ಗೆ ಆಡಳಿತಾಧಿಕಾರಿ ನೇಮಕ: ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ನೇಮಕ ಮಾಡಿ ಸರ್ಕಾರದ ಆದೇಶ