ಕರ್ನಾಟಕ

karnataka

ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸ್​ ಮಾಡಲು ಆದೇಶಿಸುವಂತೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

By

Published : Nov 17, 2020, 11:37 PM IST

ಶೇ. 75ರಷ್ಟು ಅಂಗವೈಕಲ್ಯ ಸಮಸ್ಯೆಗೆ ಒಳಗಾಗಿರುವ ತನ್ನನ್ನು ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಗೊಳಿಸಲು ಮಂಡಳಿಗೆ ಆದೇಶಿಸುವಂತೆ ಕೋರಿದ್ದ ವಿದ್ಯಾರ್ಥಿಯ ಅರ್ಜಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

High Court rejected the application seeking an order to pass the SSLC examination
ಹೈಕೋರ್ಟ್

ಬೆಂಗಳೂರು: ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳನ್ನು ಆಧರಿಸಿ ಎಸ್​ಎಸ್​ಎಲ್​ಸಿ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಳಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಆದೇಶಿಸಬೇಕು ಎಂದು ಅನಾರೋಗ್ಯಪೀಡಿತ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಆದರೆ, ಕೇಂದ್ರ ಸರ್ಕಾರ 2013ರ ಫೆಬ್ರವರಿ 26ರಂದು ಹೊರಡಿಸಿರುವ ಕಚೇರಿ ಪತ್ರದಂತೆ ಅರ್ಜಿದಾರ ವಿದ್ಯಾರ್ಥಿ ಅಥವಾ ಆತನ ಪರಿಸ್ಥಿತಿಯಲ್ಲಿರುವ ಮಕ್ಕಳು ಪರೀಕ್ಷೆ ಬರೆಯುವಾಗ ನಿಗದಿತ ಸಮಯಕ್ಕಿಂತ 2ಗಂಟೆ ಹೆಚ್ಚುವರಿ ಸಮಯ ನೀಡಬೇಕು ಎಂದಿದೆ. ಹಾಗೆಯೇ, ವಿದ್ಯಾರ್ಥಿಯ ಅಂಗವೈಕಲ್ಯದ ಪ್ರಮಾಣ ಪರಿಗಣಿಸಿ ಹೆಚ್ಚುವರಿ ಸಮಯ ಮಂಜೂರು ಮಾಡುವುದು ಪ್ರಾಧಿಕಾರಗಳ ವಿವೇಚನೆಗೆ ಬಿಟ್ಟಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಗೊಳಿಸಲು ಎಸ್​ಎಸ್​ಎಲ್​ಸಿ ಬೋರ್ಡ್ ನಿರ್ದೇಶಿಸಬೇಕು ಎಂದು ಕೋರಿ ಮೂಳೆ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನಗರದ ಹತ್ತನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಈ ನಿರ್ದೇಶನಗಳನ್ನು ನೀಡಿದೆ.

ಪ್ರಕರಣದ ಹಿನ್ನೆಲೆ :

ನಗರದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಭರತ್ ತಾನು ಆಸ್ಟಿಯೋಜೆನಿಸ್ ಇಮ್ಫರ್ವೆಕ್ಟಾ ಎಂಬ ಮೂಳೆ ಸಂಬಂಧಿ ರೋಗದಿಂದ ಬಳಲುತ್ತಿದ್ದೇನೆ. ಶೇಕಡಾ 75ರಷ್ಟು ಅಂಗವೈಕಲ್ಯ ಸಮಸ್ಯೆಗೆ ಒಳಗಾಗಿರುವ ತನ್ನನ್ನು ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಗೊಳಿಸಲು ಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪರೀಕ್ಷಾ ಮಂಡಳಿ ನಿಯಮಗಳ ಪ್ರಕಾರ ವಿದ್ಯಾರ್ಥಿಯ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಶಾಸನಾತ್ಮಕ ನೀತಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ವಾದ ಪ್ರತಿವಾದ ಆಲಿಸಿದ ಪೀಠ, ಕೇಂದ್ರ ಸರ್ಕಾರ ಅಂಗವೈಕಲ್ಯ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ಪದ್ಧತಿ ಯೋಜನೆ ಜಾರಿ ಮಾಡಿದೆ. ಶೈಕ್ಷಣಿಕ ಸಾಲಿನಲ್ಲಿ ಅಂಗವಿಕಲ ವಿದ್ಯಾರ್ಥಿಗಳು ಹಿಂದುಳಿಯಬಾರದು ಎಂಬುದು ಯೋಜನೆಯ ಆಶಯವಾಗಿದೆ. ಆದ್ದರಿಂದ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವಾಗ ಹೆಚ್ಚುವರಿ ಸಮಯ ಮಂಜೂರು ಮಾಡಬೇಕು ಎಂದು ಪರೀಕ್ಷಾ ಮಂಡಳಿಗೆ ನಿರ್ದೇಶಿಸಿದೆ.

ABOUT THE AUTHOR

...view details