ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ತಿರಸ್ಕರಿಸಿದೆ.
ಜಾಮೀನು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಕೆ. ನಟರಾಜನ್ ಅವರಿದ್ದ ಪೀಠ ಇಂದು ಪ್ರಕಟಿಸಿತು. ಆರೋಪಿ ಪ್ರಭಾವಿಯಾಗಿದ್ದು, ಜಾಮೀನು ದೊರೆತರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಅಲ್ಲದೇ, ಅರ್ಜಿದಾರರು ಜಾಮೀನು ಕೋರಿ ಒಂದರ ಹಿಂದೊಂದು ಅರ್ಜಿ ಸಲ್ಲಿಸುತ್ತ ಬಂದಿದ್ದು, ಅವು ಈಗಾಗಲೇ ವಜಾಗೊಂಡಿವೆ. ಹಿಂದೆ ಸಲ್ಲಿಸಿದ್ದ ಅರ್ಜಿಗಳಲ್ಲಿ ಮಾಡಲಾಗಿದ್ದ ಮನವಿಗಳ ಆಧಾರದ ಮೇಲೆ ಮತ್ತೆ ಜಾಮೀನು ಕೋರಲಾಗಿದ್ದು, ಜಾಮೀನು ಮಂಜೂರು ಮಾಡಲು ಪರಿಗಣಿಸಬಹುದಾದ ಯಾವುದೇ ಹೊಸ ಅಂಶಗಳನ್ನು ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿತು.
ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ್ದ ವಕೀಲ ಪಿ. ಪ್ರಸನ್ನ ಕುಮಾರ್, ವಿನಯ್ ಕುಲಕರ್ಣಿ ಹಾಗೂ ಯೋಗೇಶ್ ಗೌಡ ನಡುವೆ ವೈಯಕ್ತಿಕ ದ್ವೇಷ ಹಾಗೂ ರಾಜಕೀಯ ವೈಷಮ್ಯವಿತ್ತು. ಇದೇ ಕಾರಣಕ್ಕೆ ವಿನಯ್ ಕುಲಕರ್ಣಿ ಹತ್ಯೆಗೆ ಸಂಚು ರೂಪಿಸಿದ್ದು, ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಆರೋಪಿ ಪ್ರಭಾವಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶ ಪಡಿಸುವ ಸಾದ್ಯತೆ ಇದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.