ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರು ಆಗಿರುವ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ) ನಡೆಸುತ್ತಿರುವ ತನಿಖೆಗೆ ವಿಧಿಸಿರುವ ತಡೆಯಾಜ್ಞೆಯನ್ನು ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ತಡೆಯಾಜ್ಞೆ ವಿಸ್ತರಿಸಿ ವಿಚಾರಣೆ ಮುಂದೂಡಿದರು.
ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ವಕೀಲರಾದ ಪಿ.ಪ್ರಸನ್ನಕುಮಾರ್, ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪವಿರುವವರ ವಿರುದ್ಧದ ಪ್ರಕರಣಗಳಲ್ಲಿ ತನಿಖೆಯಿಂದ ಆರೋಪಿತರಿಗೆ ತೊಂದರೆಯಾದರೂ ತಡೆ ನೀಡಬಾರದು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಹೀಗಾಗಿ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಅರ್ಜಿದಾರರಾದ ಶಿವಕುಮಾರ್ ಅವರ ಪುತ್ರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿ ಆದಾಯದ ಮೂಲ ತಿಳಿಸಲು ಕೋರಲಾಗಿದೆ. ಇದೀಗ ನ್ಯಾಯಪೀಠ ನೀಡಿರುವ ತಡೆಯಾಜ್ಞೆಯಿಂದ ಪ್ರಕರಣ ತನಿಖೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿದರು.
ಅಲ್ಲದೆ, ಸಿಬಿಐ ಎಫ್‌ಐಆರ್ ದಾಖಲು ಮಾಡಿ ಈಗಾಗಲೇ ಎರಡು ವರ್ಷಗಳಾಗಿವೆ. ಆದರೆ, ಅರ್ಜಿದಾರರು ಈಗ ಹೈಕೋರ್ಟ್‌ನಲ್ಲಿ ಆದೇಶವನ್ನು ಪ್ರಶ್ನಿಸುತ್ತಿದ್ದಾರೆ. ಅರ್ಜಿದಾರ ಆರೋಪಿ ಡಿ.ಕೆ.ಶಿವಕುಮಾರ್ ಸಂಬಂಧಿಯಾದ ಶಶಿಕುಮಾರ್ ಶಿವಣ್ಣ ಎಂಬುವರೂ ಈ ಹಿಂದೆ ಇದೇ ರೀತಿಯಲ್ಲಿ ಸಿಬಿಐ ತನಿಖೆಗೆ ಸರ್ಕಾರ ಆದೇಶಿಸಿದ್ದನ್ನು ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯನ್ನು 2022ರ ಜುಲೈ 22ರಂದು ರದ್ದುಗೊಳಿಸಿತ್ತು. ನಂತರ ವಿಭಾಗೀಯ ನ್ಯಾಯಪೀಠ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಜತೆಗೆ, ತನಿಖೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಸಲ್ಲಿಸಲು ಮುಂದಾದರು. ವರದಿ ಸ್ವೀಕರಿಸಲು ನಿರಾಕರಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ಸಿಬಿಐ ದಾಖಲಿಸಿರುವ ಈ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಡಿ.ಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ 11ರಂದು ವಿಚಾರಣೆ ನಡೆಸಿ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಈ ತಡೆ ಆದೇಶವನ್ನು ತೆರವುಗೊಳಿಸುವಂತೆ ಕೋರಿ ಸಿಬಿಐ ಈ ಮನವಿ ಸಲ್ಲಿಸಿದೆ.
ಇದನ್ನೂ ಓದಿ:ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ: ತಡೆಯಾಜ್ಞೆ ತೆರವಿಗೆ ಸಿಬಿಐ ಮನವಿ