ಬೆಂಗಳೂರು: ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಪರ ವಹಿಸುವಂತೆ ಸಂತ್ರಸ್ತೆಯ ಪತಿಯ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿಗೆ ಒತ್ತಡ ಹೇರಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣದಲ್ಲಿ ಆರೋಪಿತರ ವಿರುದ್ಧದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಪ್ರಕರಣದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಶ್ರೀಗಳು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು ಕೋರ್ಟ್ ರದ್ದು ಮಾಡಿದೆ.
ಪ್ರಕರಣ ಸಂಬಂಧ ಪುತ್ತೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ದೋಷಾರೋಪ ಪಟ್ಟಿ ರದ್ದು ಕೋರಿ ರಾಘವೇಶ್ವರ ಶ್ರೀಗಳು ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ರಾಘವೇಶ್ವರ ಭಾರತೀ ಶ್ರೀಗಳ ಪರ ವಾದ ಮಂಡಿಸಿದ ವಕೀಲ ಪಿ.ಎನ್. ಮನಮೋಹನ್ ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಶಾಮ್ ಪ್ರಸಾದ್ ಶಾಸ್ತ್ರಿ ಹತಾಶ ಮನೋಭಾವದಿಂದ ಆತ್ಮಹತ್ಯೆಗೆ ಶರಣಾದಂತಿದೆ. ಅವರು ಬರೆದಿಟ್ಟಿದ್ದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರುಗಳ ಉಲ್ಲೇಖವೇ ಇಲ್ಲ. ಅಂತೆಯೇ, ತನಿಖಾಧಿಕಾರಿಗಳು ಶಾಮ್ ಪ್ರಸಾದ್ ಶಾಸ್ತ್ರಿ ಮೃತಪಟ್ಟ ಒಂದು ತಿಂಗಳ ಬಳಿಕ ಹೇಳಿಕೆ ತಯಾರಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?:ರಾಮಕಥಾ ಗಾಯಕಿಯ ಪತಿಯ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸೆಪ್ಟೆಂಬರ್ 1 ರಂದು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಹೇಳಬೇಕು. ನೀವು ಸ್ವಾಮೀಜಿ ಪರ ನಿಲ್ಲಬೇಕು ಎಂದು ಸ್ವಾಮೀಜಿ ಕಡೆಯವರು ದೂರವಾಣಿ ಮೂಲಕ ಒತ್ತಡ ಹಾಕಿದ್ದರು ಮತ್ತು ಈ ಒತ್ತಡ ಹೇರುವ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತಿತರರು ಇದ್ದರು ಎಂದು ಆರೋಪಿಸಿ ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರ ಪತ್ನಿ ಸಂಧ್ಯಾಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪುತ್ತೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ರಾಘವೇಶ್ವರ ಶ್ರೀಗಳು ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ವಿನಯ್ ಕುಲಕರ್ಣಿ ಧಾರಾವಾಡ ಪ್ರವೇಶಕ್ಕೆ ಅನುಮತಿ ಕೋರಿ ಅರ್ಜಿ: ಸರ್ಕಾರ, ಸಿಬಿಐಗೆ ನೋಟಿಸ್ ನೀಡಿದ ಹೈಕೋರ್ಟ್