ಬೆಂಗಳೂರು : ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ವಿತರಿಸುವ ಕಾಯ ನಡೆಯುತ್ತಿದೆ. ಈ ಮಧ್ಯೆ ವಿಶೇಷ ಚೇತನರಿಗೆ ಲಸಿಕೆ ಪಡೆಯಲು ಸರಿಯಾದ ವ್ಯವಸ್ಥೆ ಮಾಡದಿರುವುದಕ್ಕೆ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಕೋರ್ಟ್ ಆದೇಶದ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತಿದೆ.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶ ನೀಡಿದ್ದು, ಯಾವುದೇ ಅಂಗವೈಕಲ್ಯ ಹೊಂದಿರುವ 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮತ್ತು ಅವರ ಆರೈಕೆದಾರರಿಗೆ ಕೋವಿಡ್ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಇನ್ನು, ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, 45 ವರ್ಷ ಮೇಲ್ಪಟ್ಟ ವಿಶೇಷ ಚೇತನರಿಗೂ ಲಸಿಕೆ ನೀಡಲು ತುರ್ತು ಕ್ರಮಕೈಗೊಳ್ಳುವಂತೆ ಆದೇಶಿಸಿದೆ.
ಓದಿ : 'ಬ್ಲಾಕ್ ಫಂಗಸ್ ಬಗ್ಗೆ ತಜ್ಞರ ವರದಿ ಕೇಳಿದ್ದೇವೆ, ಉಚಿತ ಚಿಕಿತ್ಸೆ ಬಗ್ಗೆ ಶೀಘ್ರವೇ ನಿರ್ಧಾರ'
ಕೋರ್ಟ್ ಆದೇಶದ ಬಳಿಕ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ಹೆಚ್ಎಂ) ಎಚ್ಚೆತ್ತುಕೊಂಡಿದ್ದು, ಅಂಗವೈಕಲ್ಯ ಹೊಂದಿರುವ 45 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಒದಗಿಸಿಕೊಡುವಂತೆ ಸೂಚಿಸಿದೆ.
ಆರೋಗ್ಯ ಇಲಾಖೆಯು ಈ ಪಟ್ಟಿಯಂತೆ ಸೂಕ್ಷ್ಮ ಕ್ರಿಯಾ ಯೋಜನೆ ತಯಾರಿಸಿ, ಈ ಫಲಾನುಭವಿಗಳಿಗೆ ಸುಲಭವಾಗಿ ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಿದೆ.
ಸಾಲಿನ ಬದಲು ಮೊದಲ ಆದ್ಯತೆ ಕಲ್ಪಿಸಿ :ಲಸಿಕಾ ಕೇಂದ್ರಗಳಲ್ಲಿ ವಿಶೇಷ ಚೇತನರನ್ನು ಸಾಲಿನಲ್ಲಿ ಕಾಯಿಸದೆ ಮೊದಲ ಆದ್ಯತೆ ನೀಡಬೇಕು. ಲಸಿಕಾ ಕೇಂದ್ರಗಳಲ್ಲಿ ವ್ಹೀಲ್ ಚೇರ್, ನೀರು, ಶೌಚಾಲಯದಂತಹ ಸೌಲಭ್ಯ ಒದಗಿಸಬೇಕು ಮತ್ತು ತಲುಪಲು ಸಾಧ್ಯವಾಗುವಂತಹ ಸ್ಥಳಗಳಲ್ಲಿ ಲಸಿಕೆ ನೀಡುವಂತೆ ಕೋರ್ಟ್ ಸಲಹೆ ನೀಡಿದೆ.
ವಾಟ್ಸ್ಆ್ಯಪ್ ಇ-ಮೇಲ್ ಮತ್ತು ಎಸ್‌ಎಂಎಸ್ ಮುಖಾಂತರ ಕೂಡ ಮನವಿ ಪಡೆದು ಅರ್ಹ ಫಲಾನುಭವಿಗಳ ನೋಂದಣಿ ಮಾಡಬಹುದು. ಫಲಾನುಭವಿಗಳಿಗೆ ಮುಂಚಿತವಾಗಿ ಅವರು ಲಸಿಕೆ ಪಡೆಯಬೇಕಾದ ದಿನಾಂಕ ಮತ್ತು ಸಮಯದ ಮಾಹಿತಿ ರವಾನಿಸಬೇಕು.
ಫಲಾನುಭವಿಗಳಿಗೆ ಲಸಿಕಾ ಕೇಂದ್ರಗಳಿಗೆ ಬಂದು ಹೋಗಲು ವಾಹನದ ವ್ಯವಸ್ಥೆಗಳನ್ನು ಮಾಡಬೇಕು. ಇದಕ್ಕಾಗಿ ರೋಟರಿ, ಲಯನ್ಸ್, ರೆಡ್ಕ್ರಾಸ್ನಂತಹ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆಯುವಂತೆ ನ್ಯಾಯಾಲಯ ಸೂಚಿಸಿದೆ.