ಬೆಂಗಳೂರು: ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದ ರಾಜಕೀಯ ಪಕ್ಷಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿದಾರರ ಪರ ವಕೀಲರು, ರಾಜ್ಯ ರಾಜಕೀಯ ಪಕ್ಷಗಳ ಮಾಹಿತಿ ನೀಡಿದರು. ಇದನ್ನು ದಾಖಲಿಸಿಕೊಂಡ ಪೀಠ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳಾಗಿ ಅರ್ಜಿಯಲ್ಲಿ ಸೇರಿಸಿ, ತಿದ್ದುಪಡಿ ಮಾಡಲು ಅರ್ಜಿದಾರರಿಗೆ ಒಂದು ವಾರ ಕಾಲಾವಕಾಶ ನೀಡಿತು. ಅಲ್ಲದೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಿಪಿಐ(ಎಮ್) ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿ, ಡಿಸೆಂಬರ್ 2ಕ್ಕೆ ವಿಚಾರಣೆ ಮುಂದೂಡಿತು.
ಇದೇ ವೇಳೆ, ರಾಜಕೀಯ ಪಕ್ಷಗಳು ಕೋವಿಡ್ ನಿಯಮಗಳನ್ನು ಪಾಲಿಸುವುದು ಅವುಗಳ ಜವಾಬ್ದಾರಿ. ಹೀಗಾಗಿ ನಿಯಮಗಳನ್ನು ಪಾಲಿಸಲು ಸರ್ಕಾರಕ್ಕೆ ಸಹಕಾರ ನೀಡಬೇಕು. ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರು ನಿಯಮಗಳನ್ನು ಉಲ್ಲಂಘಿಸದಂತೆ ಸೂಚಿಸಬೇಕು. ಈ ಕುರಿತು ಪಕ್ಷಗಳು ಲಿಖಿತವಾಗಿ ತಮ್ಮ ಸ್ಪಷ್ಟನೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಇನ್ನು ರಾಜ್ಯ ಸರ್ಕಾರ ಕೋವಿಡ್ ನಿಯಮಗಳನ್ನು ಜಾರಿ ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ಹಾಗೂ ಈವರೆಗೆ ವಿಧಿಸಿರುವ ದಂಡದ ವಿವರಗಳನ್ನು ಸಲ್ಲಿಸುವಂತೆಯೂ ನಿರ್ದೇಶಿಸಿತು.
ಇದನ್ನೂ ಓದಿ: ಪ್ರಸ್ತುತ ಕೊರೊನಾ ಪರಿಸ್ಥಿತಿಯ ಮಾಹಿತಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಸೂಚನೆ