ಬೆಂಗಳೂರು: ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ರಾಜ್ಯಾದ್ಯಂತ ಕೋರ್ಟ್ ಗಳಿಗೆ ರಜೆ ನೀಡಲಾಗಿದ್ದು ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ವಯೋಮಿತಿ ಪರಿಗಣಿಸದೇ ಆರ್ಥಿಕ ದುಃಸ್ಥಿತಿಗೆ ಒಳಗಾಗಿರುವ ರಾಜ್ಯದ ಎಲ್ಲ ವಕೀಲರಿಗೆ ಸಹಾಯ ಧನ ನೀಡುವಂತೆ ಕರ್ನಾಟಕ ವಕೀಲರ ಪರಿಷತ್ ಗೆ ಹೈಕೋರ್ಟ್ಗೆ ಸೂಚನೆ ನೀಡಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನೆರವು ನೀಡಲು ಪರಿಷತ್ತಿಗೆ ನಿರ್ದೇಶಿಸಿಬೇಕು ಎಂದು ಕೋರಿ ವಕೀಲ ಎಚ್.ಸಿ. ಶಿವರಾಮು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ರಾಜ್ಯ ವಕೀಲರ ಪರಿಷತ್ತಿನ ಪರ ವಕೀಲರು ವಾದಿಸಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ಹಣದ ಅಗತ್ಯವಿರುವ ವಕೀಲರಿಗೆ ನೆರವು ನೀಡಲು ಪರಿಷತ್ 2 ಕೋಟಿ ರೂ. ನೀಡಲಿದೆ. ಭಾರತೀಯ ವಕೀಲರ ಪರಿಷತ್ 45 ಲಕ್ಷ ರೂ. ಹಣ ನೀಡಿದೆ. ಇನ್ನೂ ಹಿರಿಯ ವಕೀಲರಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಮಹಿಳಾ ವಕೀಲರನ್ನು ವಿಶೇಷವಾಗಿ ಪರಿಗಣಿಸಿ ನೆರವು ನೀಡಲಾಗುವುದು ಎಂದು ತಿಳಿಸಿದರು.