ಬೆಂಗಳೂರು: ಕಿಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿ(ಕೆಇಸಿ) ಲಿಮಿಟೆಡ್ ಅಧ್ಯಕ್ಷ ವಿಜಯ್ ರವೀಂದ್ರ ಕಿರ್ಲೋಸ್ಕರ್ ಅವರು 1999ರಲ್ಲಿ ಸ್ಥಾಪಿಸಿದ್ದ ಟಿಡಿ ಪವರ್ ಸಿಸ್ಟಮ್ ಲಿಮಿಟೆಡ್ (ಟಿಡಿಪಿಎಸ್‌ಎಸ್‌ಎಲ್)ನ 555 ಕೋಟಿ ರೂ. ಮೌಲ್ಯದ 2.51 ಕೋಟಿ ಬೆಲೆ ಬಾಳುವ ಷೇರುಗಳನ್ನು ಮಾರಾಟ ಮಾಡದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತನ್ನ ಸೋದರಳಿಯ ಸೇರಿದಂತೆ ಇತರರಿಂದ ವರ್ಗಾವಣೆ ಮಾಡದಂತೆ ನಿರ್ದೇಶನ ನೀಡುವಂತೆ ಕೋರಿ ವಿಜಯ್ ಕಿರ್ಲೋಸ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿಯಲ್ಲಿ ಪ್ರತಿವಾದಿಗಳು ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿ ನ್ಯಾಯಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಕಿರ್ಲೋಸ್ಕರ್ ಅವರ ಸಂಬಂಧಿ ಹಾಗೂ ಟಿಡಿಪಿಎಸ್‌ಎಲ್‌ನ ಅಧ್ಯಕ್ಷರದ ಮೊಹಿಬ್ ನೋಮನ್‌ಭಾಯ್ ಖೇರಿಚಾ, ಕಿರ್ಲೋಸ್ಕರ್ ಅವರ ಸೋದರಳಿಯ ನಿಖಿಲ್ ಕುಮಾರ್ ಮತ್ತಿತರರು ಸಂಸ್ಥೆಯ 2,51,32,165 ಷೇರುಗಳಿಗೆ ಸಂಬಂಧ ಹಕ್ಕುಗಳನ್ನು ಮೂರನೇ ವ್ಯಕ್ತಿಗೆ ವಹಿಸುವುದು, ವರ್ಗಾವಣೆ ಮಾಡುವುದು ಸೇರಿದಂತೆ ಯಾವುದೇ ಕ್ರಮಕ್ಕೆ ಮುಂದಾಗದಂತೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಕಿರ್ಲೊಸ್ಕರ್ ಎಲೆಕ್ಟ್ರಿಕ್ ಕಂಪೆನಿಯ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವರ ಸಂಬಂಧಿಕರಾಗಿದ್ದ ಖರೇಚಾ ಅವರಿಗೆ ಎಲ್ಲ ಅಧಿಕಾರಗಳನ್ನು ಹಸ್ತಾಂತರಿಸಲಾಗಿತ್ತು. ಜತೆಗೆ, ಟಿಡಿಪಿಎಸ್‌ಎಲ್‌ನಲ್ಲಿ ಕಿರ್ಲೋಸ್ಕರ್ ಮತ್ತು ಕೆಇಸಿ ಟ್ರಸ್ಟ್ ಸೇರಿದ ಶೇ.67.70 ರಷ್ಟು ಷೇರುಗಳನ್ನು ಹೊಂದಿದ್ದು, ಬ್ಯಾಂಕ್‌ನಿಂದ ಸಾಲದ ಸಮಸ್ಯೆ ಎದುರಾಗುವ ಸಂದರ್ಭಲ್ಲಿನ ತೊಂದರೆಯನ್ನು ನಿವಾರಿಸುವುದಕ್ಕಾಗಿ ಕಿರ್ಲೋಸ್ಕರ್ ಅವರು ಟಿಡಿಪಿಎಸ್‌ಎಲ್‌ನ ಅಧ್ಯಕ್ಷ ಮತ್ತು ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಖೆರೇಚಾ ಅವರಿಗೆ ಹಸ್ತಾಂತರಿಸಿದ್ದರು.