ಬೆಂಗಳೂರು:ಎಕ್ಸ್ ಕಾರ್ಪ್ನಿಂದ (ಟ್ವಿಟರ್) ಆಕ್ಷೇಪಾರ್ಹ ಆರೋಪದ ಟ್ವೀಟ್ಗಳನ್ನು ತೆಗೆದಿರುವುದಕ್ಕೆ ಸಂಬಂಧಿಸಿದಂತೆ ಸಕಾರಣ ನೀಡಿಲ್ಲ. ಈ ಸಂಬಂಧ ಪರಿಶೀಲನೆ ನಡೆಸಬೇಕು ಎಂಬ ಅರ್ಜಿದಾರರ ಮನವಿ ಸಂಬಂಧ ತನ್ನ ನಿಲುವು ತಿಳಿಸುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಕೆಲವು ವೈಯಕ್ತಿಕ ಖಾತೆಗಳನ್ನು ರದ್ದು ಮಾಡಿದ್ದ ಸಚಿವಾಲಯದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪು ಕುರಿತು ಎಕ್ಸ್ ಕಾರ್ಪ್ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಜ್ಜನ್ ಪೂವಯ್ಯ, ಕೆಲ ಖಾತೆಗಳಿಗೆ ನಿರ್ಬಂಧ ಹೇರಿರುವ ಸಂಬಂಧ ಕಾರಣ ನೀಡಬೇಕು ಎಂಬ ನಿಯಮವಿದ್ದರೂ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸೂಕ್ತ ಕಾರಣಗಳನ್ನು ನೀಡಿಲ್ಲ. ಹೀಗಾಗಿ, ಖಾತೆಗಳನ್ನು ಸ್ಥಗಿತಗೊಳಿಸಿರುವ ಆದೇಶವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಕೋರಿದರು.
ಅಲ್ಲದೇ, ಮೇಲ್ನೋಟಕ್ಕೆ ಅರ್ಜಿದಾರರ ವಾದದಲ್ಲಿ ಸತ್ಯಾಂಶವಿದೆ ಎಂದು ಗೊತ್ತಾಗುತ್ತಿದೆ. ಹೀಗಾಗಿ ಎಕ್ಸ್ ಕಾರ್ಪ್ ತನ್ನ ಅಭಿಪ್ರಾಯವನ್ನು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ರವಾನಿಸಿ, ಅಲ್ಲಿಂದ ಅಭಿಪ್ರಾಯ ಪಡೆದು ಸಹಾಯಕ ಸಾಲಿಸಿಟರ್ ಜನರಲ್ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಲಿ ಎಂದು ಪೀಠ, ಈ ಅಂಶ ಆಂತರಿಕವಾಗಿ ಚರ್ಚೆ ನಡೆಯುವುದಾಗಿದೆ. ಈ ಸಂಬಂಧ ಪ್ರಚಾರ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿತು. ಇದೇ ವೇಳೆ ಅರ್ಜಿದಾರರ ಹೆಚ್ಚುವರಿ ದಾಖಲೆಗಳೊಂದಿಗೆ ಅರ್ಜಿಯನ್ನು ತಿದ್ದುಪಡಿ ಮಾಡುವುದಕ್ಕೆ ನ್ಯಾಯಪೀಠ ಅವಕಾಶ ಮಾಡಿಕೊಟ್ಟಿತು.