ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಕರೆದೊಯ್ದ ಮಗಳನ್ನು ತಾಯಿಗೆ ಒಪ್ಪಿಸುವಂತೆ ತಂದೆಗೆ ಹೈಕೋರ್ಟ್‌ ಆದೇಶ - ಈಟಿವಿ ಭಾರತ ಕನ್ನಡ

ಚಿಕಿತ್ಸೆ ಕೊಡಿಸುವುದಾಗಿ ಹೇಳಿ ತನ್ನ ಅಪ್ರಾಪ್ತ ಮಗಳನ್ನು ಪತಿ ಅಕ್ರಮವಾಗಿ ಹೊರ ರಾಜ್ಯಕ್ಕೆ ಕೊಂಡೊಯ್ದಿದ್ದಾರೆ ಎಂದು ಪತ್ನಿ ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್​
ಹೈಕೋರ್ಟ್​

By

Published : May 18, 2023, 7:00 AM IST

ಬೆಂಗಳೂರು: ಚಿಕಿತ್ಸೆಯ ನೆಪದಲ್ಲಿ ಮಗಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ತಂದೆಗೆ, ಮಗುವನ್ನು ತಾಯಿಗೆ ಒಪ್ಪಿಸುವಂತೆ ಹೈಕೋರ್ಟ್​ ಸೂಚನೆ ನೀಡಿದೆ. ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ವಿಜಯ ಕುಮಾರ ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿತು.

ಮಗಳನ್ನು ಕೂಡಲೇ ಅರ್ಜಿದಾರೆಯ ಸುಪರ್ದಿಗೆ ಒಪ್ಪಿಸುವಂತೆ ಆಕೆಯ ಪತಿಗೆ ನಿರ್ದೇಶಿಸಿದ ಹೈಕೋರ್ಟ್, ಮಗಳ ಶಾಶ್ವತ ಸುಪರ್ದಿಗೆ ಕೋರಿ ಪತ್ನಿ ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ತಾನು ಮಗುವಿನ ಕಾನೂನುಬದ್ಧ ಪೋಷಕ ಎಂಬುದಾಗಿ ಘೋಷಿಸುವಂತೆ ಕೋರಿ ಪಶ್ಚಿಮ ಬಂಗಾಳದಲ್ಲಿ ಪತಿ ಅರ್ಜಿ ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳು ಇತ್ಯರ್ಥವಾಗುವವರೆಗೆ ಮಗಳು ತಾಯಿಯ ವಶದಲ್ಲಿರಬೇಕು. ತಂದೆಗೆ ಮಗಳ ಭೇಟಿಯ ಹಕ್ಕು ನೀಡಬೇಕು ಎಂದು ನಿರ್ದೇಶನ ನೀಡಿದೆ.

ತಂದೆಯೊಂದಿಗೆ ಸಾಮಾಜಿಕ, ಭೌತಿಕ ಮತ್ತು ಮಾನಸಿಕ ಸಂಪರ್ಕವನ್ನು ಮಗಳು ಕಳೆದುಕೊಳ್ಳಬಾರದು. ದಂಪತಿ ಪ್ರತ್ಯೇಕವಾಗಿದ್ದರೂ ಸಹ ಮಗಳಿಗೆ ಉತ್ತಮವಾದ ಪಾಲಕರ ಆರೈಕೆ ಸಿಗಬೇಕು. ಆ ದಿಸೆಯಲ್ಲಿ ನಿತ್ಯ ಶಾಲೆಯಿಂದ ಮನೆಗೆ ಬಂದ ನಂತರ ತಂದೆ, ಮಗಳಿಗೆ ಫೋನ್/ವಿಡಿಯೋ ಕರೆ ಮಾಡಿ ಯೋಗಕ್ಷೇಮ ವಿಚಾರಿಸಬಹುದು ಎಂದು ತಿಳಿಸಿದೆ. ವಾರಂತ್ಯದಲ್ಲಿ ಪತಿ ಬೆಂಗಳೂರಿಗೆ ಬಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಮಗಳೊಂದಿಗೆ ಸಮಯ ಕಳೆಯಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ನಿರ್ದೇಶನ ಕೊಟ್ಟಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ..: 2012ರ ಫೆ.22ಕ್ಕೆ ಅಂತರ್‌ಧರ್ಮೀಯ ವಿವಾಹವಾಗಿದ್ದ ದಂಪತಿಗೆ 2016ರ ಜೂ.25ಕ್ಕೆ ಮಗಳು ಜನಿಸಿದ್ದಳು. ದಂಪತಿ 2017ರ ಜನವರಿಯಿಂದ 2018ರ ಜೂನ್‌ವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿದ್ದರು. ಪತ್ನಿ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ಪತಿ ಪಶ್ವಿಮ ಬಂಗಾಳದಲ್ಲಿ ವಾಸವಾಗಿದ್ದರು. 2022ರ ಡಿ.16ರಂದು ಬೆಂಗಳೂರಿಗೆ ಬಂದಿದ್ದ ಪತಿ, ಮಗಳನ್ನು ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದರು. ಇದರಿಂದ ಪತ್ನಿ ಹೈಕೋರ್ಟ್​ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತಿ ಪ್ರಕರಣದಲ್ಲಿ ತನ್ನ ವಿರುದ್ಧ ಪತ್ನಿ ಸುಳ್ಳು ಮತ್ತು ಆಧಾರರಹಿತ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಸ್ನೇಹಿತ ಕರೆ ಮಾಡಿ, ‘ನನ್ನ ಮಗಳು ಜ್ವರ ಮತ್ತು ಕಣ್ಣಿನ ಸೋಂಕಿನಿಂದ ನರಳುತ್ತಿರುವುದಾಗಿ ತಿಳಿಸಿದರು. 2016ರ ಡಿ.16ರಂದು ನಾನು ಬೆಂಗಳೂರಿಗೆ ಬಂದಿದ್ದೆ. ನನ್ನ ನೋಡಿದ ಕೂಡಲೇ ಮಗಳು ಜೋರಾಗಿ ಅತ್ತಳಲ್ಲದೆ, ಐದಾರು ದಿನಗಳಿಂದ ಸೂಕ್ತವಾಗಿ ಆಹಾರ ಕೊಟ್ಟಿಲ್ಲ ಎಂದಿದ್ದರು. ಜೊತೆಗೆ, ಜ್ವರದಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಕಲ್ಪಿಸಲು ಮಗಳನ್ನ ಕರೆದುಕೊಂಡು ಹೋಗಲು ನನ್ನ ಅತ್ತೆ ಅನುಮತಿ ನೀಡಿದ್ದರು.

ಬಳಿಕ ಮಗಳಿಗೆ ಔಷಧಿ ಕೊಡಿಸಿ, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಕರೆದುಕೊಂಡು ಹೋದೆ, ಮರುದಿನ ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಿದ್ದೆ. ವೈದ್ಯರ ಸಲಹೆ ಮೇರೆಗೆ ನೇತ್ರ ತಜ್ಞರಿಂದಲೂ ಚಿಕಿತ್ಸೆ ಕೊಡಿಸಿದ್ದೆ ಎಂದು ಹೇಳಿ, ಇದಕ್ಕೆ ಸಂಬಂಧ ದಾಖಲೆಗಳನ್ನು ನ್ಯಾಯಪೀಠಕ್ಕೆ ಒಪ್ಪಿಸಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಮಗಳನ್ನು ಪಶ್ವಿಮ ಬಂಗಾಳಕ್ಕೆ ಕರೆದೊಯ್ದು, ಚಿಕಿತ್ಸೆ ಕಲ್ಪಿಸಲಾಗಿದೆ. ಅಲ್ಲಿಯೇ ಶಾಲೆಗೂ ಸೇರಿಸಿದ್ದಾರೆ. ಆದ್ದರಿಂದ ಮಗಳನ್ನು ತಮ್ಮ ಸುಪರ್ದಿಗೆ ಅಕ್ರಮವಾಗಿ ಕರೆದುಕೊಂಡು ಹೋಗಿದ್ದಾರೆ ಎಂಬ ಅರ್ಜಿದಾರೆ ದೂರು ನೀಡಿದ್ದಾರೆ. ಈ ಪರಿಸ್ಥಿತಿ ಹೀಗಿರುವುದರಿಂದ ಮಗಳನ್ನು ಅರ್ಜಿದಾರೆಯ ಸುಪರ್ದಿಗೆ ನೀಡಬೇಕು ಎಂದು ನಿರ್ದೇಶಿಸಿತು.

ಇದನ್ನೂ ಓದಿ:ಖಾಸಗಿ ಜಮೀನು ವಶಪಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗದು: ಹೈಕೋರ್ಟ್

ABOUT THE AUTHOR

...view details