ಬೆಂಗಳೂರು: ಬೀದರ್ ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಪಾರ್ಕ್ (ಐಟಿ-ಬಿಟಿ ಪಾರ್ಕ್) ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಐಟಿ-ಬಿಟಿ ಪಾರ್ಕ್ ಸ್ಥಾಪಿಸುವ ವಿಚಾರ ಸರ್ಕಾರದ ನೀತಿ ರೂಪಕ ವಿಷಯ, ಹಣಕಾಸು ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡಿರುತ್ತದೆ. ಅಷ್ಟಕ್ಕೂ ಬೀದರ್‌ನಲ್ಲಿ ಐಟಿ-ಬಿಟಿ ಪಾರ್ಕ್ ಆಗಬೇಕು ಎಂಬ ಬಗ್ಗೆ ಅರ್ಜಿದಾರರು ಯಾವ ಪ್ರಾಥಮಿಕ ಸಂಶೋಧನೆ ಅಥವಾ ಮಾಹಿತಿ ಸಂಗ್ರಹಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಎಷ್ಟು ಮಂದಿ ಐಟಿ ವೃತ್ತಿಪರರು ಇದ್ದಾರೆ. ಅವರಲ್ಲೂ ಅಲ್ಲೇ ಕೆಲಸ ಮಾಡಲು ಆಸಕ್ತರಾಗಿದ್ದಾರೆಯೇ ಎಂಬ ಬಗ್ಗೆ ಏನಾದರೂ ಮಾಹಿತಿ ಇದೆಯೇ? ಮೇಲಾಗಿ ಇದೇ ವಿಚಾರವಾಗಿ ಈ ಹಿಂದೆ ಹೈಕೋರ್ಟ್‌ಗೆ ಎರಡು ಬಾರಿ ಅರ್ಜಿ ಸಲ್ಲಿಸಲಾಗಿದೆ. ಈಗ ಪುನಃ ಅದೇ ವಿಚಾರ ಬಂದಿದೆ. ಈ ರೀತಿ ಏನಾದರೂ ತಂದು ನ್ಯಾಯಾಲಯದಲ್ಲಿ ಸುರಿಯುವುದು ಸರಿಯಲ್ಲ. ದಂಡ ಹಾಕಿ ಈ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.