ಕರ್ನಾಟಕ

karnataka

ETV Bharat / state

ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಮನವಿ ತಿರಸ್ಕರಿಸಿದ ಹೈಕೋರ್ಟ್

ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನೆಟ್ಟಾರು ಕೊಲೆ ಆರೋಪಿ ಮನವಿ ತಿರಸ್ಕರಿಸಿದ ಹೈಕೋರ್ಟ್
ನೆಟ್ಟಾರು ಕೊಲೆ ಆರೋಪಿ ಮನವಿ ತಿರಸ್ಕರಿಸಿದ ಹೈಕೋರ್ಟ್

By ETV Bharat Karnataka Team

Published : Dec 30, 2023, 11:06 PM IST

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಪ್ರತಿ ವಿಚಾರಣೆಯ ಅಂಶಗಳನ್ನು ದಾಖಲಿಸುವ ಕೇಸ್ ಡೈರಿಯಲ್ಲಿ ಎನ್‌ಐಎ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಸಹಿ ಹಾಕಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ 8ನೇ ಆರೋಪಿ ಸುಳ್ಯದ ಮೊಹಮ್ಮದ್ ಶಿಯಾಬ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಅರ್ಜಿದಾರರ ವಾದ ತಿರಸ್ಕರಿಸಿರುವ ನ್ಯಾಯಾಲಯ, ಸುಪ್ರೀಂಕೋರ್ಟ್ ಬಾಬು ವರ್ಗೀಸ್ ವರ್ಸಸ್ ಬಾರ್ ಕೌನ್ಸಿಲ್ ಅಫ್ ಕೇರಳ ಪ್ರಕರಣದಲ್ಲಿ ಈಗಾಗಲೇ ವಿಚಾರಣಾ ನ್ಯಾಯಾಲಯಗಳು ಹೀಗೆಯೇ ನಡೆದುಕೊಳ್ಳಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದೆ.

ಅದೇ ರೀತಿ ವಿಚಾರಣೆಯನ್ನು ನಡೆಸಬೇಕೇ ಹೊರತು ಮತ್ತೊಂದು ರೂಪದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಲಾಗದು ಎಂದು ಪೀಠ ತಿಳಿಸಿದೆ. ಅಲ್ಲದೆ, ಕರ್ನಾಟಕದಲ್ಲಿ 1968ರಿಂದ ಚಾಲ್ತಿಯಲ್ಲಿರುವ ಕ್ರಿಮಿನಲ್ ರೂಲ್ಸ್ ಆಫ್ ಪ್ರಾಕ್ಟೀಸ್ ನಿಯಮದ ಪ್ರಕಾರ ವಿಚಾರಣಾ ಕೋರ್ಟ್‌ನ ನ್ಯಾಯಾಧೀಶರು ವಿಚಾರಣೆಯ ಅಂಶಗಳನ್ನು ದಾಖಲಿಸುವ ಕೇಸ್ ಡೈರಿಯಲ್ಲಿ ಪ್ರತಿ ಪುಟದಲ್ಲೂ ಸಹಿ ಹಾಕುವುದು ಕಡ್ಡಾಯವಲ್ಲ, ಹಾಗಾಗಿ ಅರ್ಜಿದಾರರ ವಾದವನ್ನು ಒಪ್ಪಲಾಗದು ಎಂದು ಪೀಠ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಕ್ರಿಮಿನಲ್ ರೂಲ್ಸ್ ಆಫ್ ಪ್ರಾಕ್ಟೀಸ್ ಪ್ರಕಾರ ಪ್ರತಿ ವಿಚಾರಣೆ ಸಂದರ್ಭಗಳಲ್ಲಿ ಅಂಶಗಳನ್ನು ದಾಖಲಿಸುವ ಪ್ರತಿ ಪುಟದಲ್ಲೂ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಸಹಿ ಹಾಕುತ್ತಾರೆ. ಅದೇ ರೀತಿ ತಮ್ಮ ಅರ್ಜಿದಾರರ ಪ್ರಕರಣದಲ್ಲೂ ಸಹ ಎನ್‌ಐಎ ಕೋರ್ಟ್‌ನ ನ್ಯಾಯಾಧೀಶರಿಗೆ ಪ್ರತಿ ಬಾರಿ ವಿಚಾರಣೆಯಲ್ಲಿ ದಾಖಲಿಸುವ ಅಂಶಗಳ ಪ್ರತಿ ಪುಟಕ್ಕೂ ಸಹಿ ಅಥವಾ ಅವರ ಮೊಹರು(ಸೀಲ್)ಹಾಕುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಜತೆಗೆ ನ್ಯಾಯಾಲಯ ಆದೇಶ ನೀಡಿದಾಗಲ್ಲೆಲ್ಲಾ ತನಿಖಾಧಿಕಾರಿ ಕೋರ್ಟ್‌ಗೆ ಕೇಸ್ ಡೈರಿ ತರುತ್ತಾರೆ. ಆಗ ನ್ಯಾಯಾಧೀಶರು ಅದರ ಪ್ರತಿ ಪುಟಕ್ಕೂ ಸಹಿ ಹಾಕಿದ್ದರೆ ಅಂತಹ ಸಂದರ್ಭದಲ್ಲಿ ದಾಖಲೆಗಳನ್ನು ತಿರುಚುವುದು ತಪ್ಪುತ್ತದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು. ಆದರೆ ಅದಕ್ಕೆ ತೀವ್ರ ಆಕ್ಷೇಪ ಎತ್ತಿದ್ದ ಎನ್‌ಐಎ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, ಕರ್ನಾಟಕದಲ್ಲಿ ಜಾರಿಯಲ್ಲಿರುವ ಕ್ರಿಮಿನಲ್ ರೂಲ್ಸ್ ಆಫ್ ಪ್ರಾಕ್ಟೀಸ್‌ನಲ್ಲಿ ಪ್ರತಿ ಬಾರಿ ಕೋರ್ಟ್ ಕೇಸ್ ಡೈರಿ ಸಮನ್ ಮಾಡಿದಾಗ ಅದಕ್ಕೆ ಕಡ್ಡಾಯವಾಗಿ ಸಹಿ ಹಾಕುವ ನಿಯಮವೇನೂ ಇಲ್ಲ.

ಹಾಗಾಗಿ ಅರ್ಜಿದಾರರ ವಾದ ಪುರಸ್ಕರಿಸಬಾರದು. ಹಾಗೊಂದು ವೇಳೆ ಪುರಸ್ಕರಿಸಿದಲ್ಲಿ ಮತ್ತೊಂದು ಸಮಸ್ಯೆ ಎದುರಾಗಿಲಿದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿ, ಅರ್ಜಿ ವಜಾಗೊಳಿಸುವಂತೆ ಕೋರಿದ್ದರು.

ಇದನ್ನೂ ಓದಿ:ಅತ್ಯಾಚಾರ ಆರೋಪ ಕೇಸ್​ ರದ್ದು; ಮಹಿಳೆಗೆ ಮಗು ಕರುಣಿಸಿದ್ದಕ್ಕೆ ಜೀವನಾಂಶ ನೀಡುವಂತೆ ವ್ಯಕ್ತಿಗೆ ಹೈಕೋರ್ಟ್​ ಆದೇಶ

ABOUT THE AUTHOR

...view details