ಬೆಂಗಳೂರು: ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಪ್ರೊಫೆಸರ್ ಸ್ಥಾನಕ್ಕೆ ಮುಂದುವರೆಸಿದ ಕ್ರಮ ಪ್ರಶ್ನಿಸಿ ಡಾ.ಉದಯ್ ಮುಳುಗುಂದ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಡಾ.ಉದಯ್ ಮುಳಗುಂದ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಯಾವುದೇ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಡೀನ್ ಕಮ್ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡುವಾಗ ಯಾವುದೇ ಸಂದರ್ಭದಲ್ಲೂ ಅರ್ಹತೆಗಳನ್ನು ಗಾಳಿಗೆ ತೂರುವಂತಿಲ್ಲ ಎಂದು ಆದೇಶ ನೀಡಿದೆ.
ಅಲ್ಲದೇ, ವೈದ್ಯಕೀಯ ಸಂಸ್ಥೆಗೆ ನಿರ್ದೇಶಕರನ್ನು ನೇಮಕ ಮಾಡುವಾಗ ಅರ್ಹತೆಯಲ್ಲಿ ರಾಜೀ ಮಾಡಿಕೊಳ್ಳಲಾಗದು ಎಂದು ತಿಳಿಸಿದೆ. ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಯಮ ಮತ್ತು ನಿಬಂಧನೆಗಳು 2017ರ ಪ್ರಕಾರ ಸೇವಾ ಷರತ್ತು ಅಥವಾ ನೇಮಕ ನಿಯಮಗಳನ್ನು ಪಾಲನೆ ಮಾಡಿಯೇ ಸರ್ಕಾರ ಆದೇಶಿಸಿದೆ. ಜತೆಗೆ ಭಾರತೀಯ ವೈದ್ಯಕೀಯ ಮಂಡಳಿಯ ನಿಬಂಧನೆಗಳ ಅನ್ವಯ ನಿರ್ದೇಶಕ ಸ್ಥಾನಕ್ಕೆ ಕನಿಷ್ಠ ಅರ್ಹತೆಗಳನ್ನು ಆಧರಿಸಿಯೇ ಮಾಡಬೇಕು. ಅದರಂತೆ ಹೊಸ ನೇಮಕಾತಿ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ನಿಯಮದಂತೆ ನಿರ್ದೇಶಕ ಸ್ಥಾನಕ್ಕೆ ಪ್ರೊಫೆಸರ್ ಆಗಿ ಐದು ವರ್ಷ ಪೂರೈಸಿರುವ ಅರ್ಹತೆ ಇರಬೇಕಾಗಿತ್ತು. ಆದರೆ ಆ ಅರ್ಹತೆ ಅರ್ಜಿದಾರರಿಗೆ ಇರಲಿಲ್ಲ. ಅವರು ಪ್ರೊಫೆಸರ್ ಆಗಿದ್ದೇ 2019ರಲ್ಲಿ, ಹಾಗಾಗಿ ಅವರು ನಿರ್ದೇಶಕ ಸ್ಥಾನಕ್ಕೆ ಅರ್ಹರಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.