ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಟ್ವಿಟರ್ ಸಂಸ್ಥೆಗೆ 50 ಲಕ್ಷ ದಂಡ ವಿಧಿಸಿದ್ದು, ಮುಂದಿನ 45 ದಿನಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ಪ್ರತಿ ದಿನಕ್ಕೆ 5 ಸಾವಿರ ದಂತೆ ಹೆಚ್ಚುವರಿ ಪಾವತಿ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ತನ್ನ ಗ್ರಾಹಕರ ಖಾತೆಗಳ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಟ್ವಿಟರ್ ಐಎನ್‌ಸಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಕಾಯ್ದಿರಿಸಿದ್ದ ಆದೇಶವನ್ನು ಇಂದು (ಶುಕ್ರವಾರ) ಪ್ರಕಟ ಮಾಡಿದೆ. ಇದೇ ಸಂದರ್ಭದಲ್ಲಿ ಆದೇಶಕ್ಕೆ ತಡೆ ನೀಡುವಂತೆ ಟ್ವಿಟರ್ ಪರ ವಕೀಲರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಅಲ್ಲದೆ, ಟ್ವಿಟರ್ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎಂಟು ಪ್ರಶ್ನೆಗಳನ್ನು ರೂಪಿಸಿದ್ದು, ಅದರಲ್ಲಿ ವಿದೇಶಿ ಕಂಪೆನಿ ಭಾರತದಲ್ಲಿ ಅರ್ಜಿ ಸಲ್ಲಿಸಬಹುದೇ ಎಂಬ ಒಂದು ಪ್ರಶ್ನೆ ಮಾತ್ರ ಅರ್ಜಿದಾರರ ಪರವಾಗಿದೆ. ಇನ್ನುಳಿದಂತೆ ಎಲ್ಲ ಪ್ರಶ್ನೆಗಳು ಟ್ವಿಟರ್‌ಗೆ ವಿರುದ್ಧವಾಗಿದೆ. ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ಹತ್ತು ನಿರ್ಬಂಧ ಆದೇಶ ಮತ್ತು 2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್‌ಗಳನ್ನು ತೆಗೆದು ಹಾಕುವಂತೆ ಟ್ವಿಟರ್‌ಗೆ ನಿರ್ದೇಶಿಸಿತ್ತು. ಒಟ್ಟು 1,474 ಖಾತೆಗಳು ಮತ್ತು 175 ಟ್ವಿಟರ್ ಯುಆರ್ಎಲ್ಗಳ ಪೈಕಿ 39 ಯುಆರ್‌ಎಲ್‌ಗಳನ್ನು ಮಾತ್ರ ನಿರ್ಬಂಧಿಸಿರುವ ಆದೇಶವನ್ನು ಮಾತ್ರ ಟ್ವಿಟರ್ ಅರ್ಜಿಯಲ್ಲಿ ಪ್ರಶ್ನಿಸಿತ್ತು. ಕೇಂದ್ರದ ಆದೇಶ ಪಾಲಿಸದೇ ಇದ್ದಕ್ಕಿದ್ದಂತೇ ಟ್ವಿಟರ್ ನ್ಯಾಯಾಲಯದ ಕದ ತಟ್ಟಿದೆ. ಟ್ವಿಟರ್ ಬಿಲಿಯನ್ ಡಾಲರ್ ಕಂಪೆನಿಯಾಗಿದ್ದು, ರೈತರು, ಕಾರ್ಮಿಕರಂತಲ್ಲ. ಹೀಗಾಗಿ ದಂಡ ವಿಧಿಸಿರುವುದಾಗಿ ಪೀಠ ತಿಳಿಸಿದೆ.
ಪ್ರಕರಣದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮನು ಕುಲಕರ್ಣಿ, ಸಂವಿಧಾನದ 226ನೇ ವಿಧಿಯು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಗೆ ಯಾವುದೇ ಸೀಮಿತವಿಲ್ಲ. ಹೈಕೋರ್ಟ್‌ನಲ್ಲಿ ತನ್ನ ಹಕ್ಕುಗಳ ಸ್ಥಾಪನೆಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಸಂವಿಧಾನದ ಅಡಿ ದೊರೆತಿರುವ 14ನೇ ವಿಧಿಯ ಅಡಿ ಹಕ್ಕು ಕೇಳಬಹುದಾಗಿದೆ. ಹೀಗಾಗಿ, 226ನೇ ವಿಧಿಯಡಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಬಂಧ ವಿಧಿಸಲಾಗಿಲ್ಲ.