ಬೆಂಗಳೂರು: ರಾಜ್ಯದಲ್ಲಿರುವ ಆನೆ ಶಿಬಿರಗಳಲ್ಲಿ ಆನೆಗಳಿಗೆ ಚಿಕಿತ್ಸೆ ನೀಡಲು ಕಾಯಂ ವೈದ್ಯರನ್ನು ನೇಮಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಆರೋಗ್ಯ ಕಾಪಾಡಲು ಚಿಕಿತ್ಸೆಗೆ ಕೈಗೊಂಡಿರುವ ಚಿಕಿತ್ಸಾ ಮಾಹಿತಿಯನ್ನು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಹೈಕೋರ್ಟ್‌ಗೆ ಸಲ್ಲಿಸಬೇಕೆಂದು ಸೂಚಿಸಿದೆ.
ವಕೀಲ ಎನ್.ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಈ ಅದೇಶ ನೀಡಿದೆ.
ಈ ಬಗ್ಗೆ ಅರ್ಜಿದಾರ ಅಮೃತೇಶ್ ವಾದ ಮಂಡನೆ ಮಾಡಿ, ಶಿಬಿರಗಳಲ್ಲಿರುವ ಆನೆಗಳಿಗೆ ಚಿಕಿತ್ಸೆ ನೀಡಲು ಪಶುವೈದ್ಯಾಧಿಕಾರಿಗಳನ್ನು ನೇಮಿಸಬೇಕು. ರಾಜ್ಯದಲ್ಲಿ ಒಟ್ಟು 8 ಆನೆ ಶಿಬಿರಗಳಿದ್ದು, ಈ ಶಿಬಿರಗಳಲ್ಲಿ 100ಕ್ಕೂ ಹೆಚ್ಚು ಆನೆಗಳಿವೆ. ಇವುಗಳ ಆರೋಗ್ಯ ಹದಗೆಟ್ಟರೆ ಚಿಕಿತ್ಸೆ ನೀಡಲು ಪ್ರತಿ ಶಿಬಿರದಲ್ಲಿ ಓರ್ವ ವೈದ್ಯರಾದರೂ ಇರಬೇಕು. 8 ಶಿಬಿರಗಳಿಗೆ ಬರೀ 3 ಜನ ವೈದ್ಯರಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅಮೃತೇಶ್ ವಾದ ಆಲಿಸಿದ ನ್ಯಾಯಪೀಠ ರಾಜ್ಯದ ಆನೆಗಳ ಶಿಬಿರಗಳಲ್ಲಿ ಆನೆಗಳಿಗೆ ಚಿಕಿತ್ಸೆ ನೀಡಲು ಕಾಯಂ ವೈದ್ಯರನ್ನು ನೇಮಕ ಮಾಡಬೇಕು. ಹಾಗೆ ಮುಂದಿನ ವಿಚಾರಣೆ ವೇಳೆ ಕೈಗೊಂಡಿರುವ ಚಿಕಿತ್ಸಾ ಮಾಹಿತಿಯನ್ನು ನೀಡುವಂತೆ ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.