ಕರ್ನಾಟಕ

karnataka

By

Published : Feb 12, 2021, 8:03 PM IST

ETV Bharat / state

ಲೋಕಾಯುಕ್ತಕ್ಕೆ ಇಲಾಖಾ ವಿಚಾರಣೆ ನಡೆಸಲು ಅವಕಾಶ ನೀಡಿ ಹೈಕೋರ್ಟ್ ನಿರ್ದೇಶನ

ಎಸಿಬಿ ಭ್ರಷ್ಟಾಚಾರ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಗಳಿಗೆ ಸಲ್ಲಿಸುವ ಆರೋಪಪಟ್ಟಿಗಳ ಪ್ರತಿಯನ್ನು ಲೋಕಾಯುಕ್ತಕ್ಕೂ ಸಲ್ಲಿಸಬೇಕು ಎಂದು ಹೈಕೋರ್ಟ್​ ನಿರ್ದೇಶಿಸಿದೆ. ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬಹುದು ಅಂತಲೂ ತಿಳಿಸಿದೆ.

HC directs Lokayukta to investigate departmental inquiry of accused
ಹೈಕೋರ್ಟ್

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಆರೋಪಿಗಳ ವಿರುದ್ಧ ದಾಖಲಿಸಿರುವ ಮತ್ತು ಮುಂದೆ ದಾಖಲಿಸಲಿರುವ ಆರೋಪಪಟ್ಟಿಗಳನ್ನು ಲೋಕಾಯುಕ್ತಕ್ಕೂ ಸಲ್ಲಿಸಬೇಕು ಎಂದು ಹೈಕೋರ್ಟ್ ಎಸಿಬಿಗೆ ನಿರ್ದೇಶಿಸಿದೆ.

ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಪೂರಕವಾಗಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿದೆ.

ಪೀಠ ತನ್ನ ಆದೇಶದಲ್ಲಿ, ಎಸಿಬಿ ಭ್ರಷ್ಟಾಚಾರ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಗಳಿಗೆ ಸಲ್ಲಿಸುವ ಆರೋಪಪಟ್ಟಿಗಳ ಪ್ರತಿಯನ್ನು ಲೋಕಾಯುಕ್ತಕ್ಕೂ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಅಲ್ಲದೆ ಲೋಕಾಯುಕ್ತ ಸಂಸ್ಥೆ ಆರೋಪಪಟ್ಟಿ ಆಧರಿಸಿ ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬಹುದು. ಹಾಗೆಯೇ ಕಾನೂನು ರೀತಿ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ. ಲೋಕಾಯುಕ್ತ ಪರ ವಿಶೇಷ ಅಭಿಯೋಜಕ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ:

ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಎಸಿಬಿ ರಚಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಚಿದಾನಂದ ಅರಸ್ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪೂರಕವಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಲೋಕಾಯುಕ್ತ ಸಂಸ್ಥೆ, ಲೋಕಾಯುಕ್ತ ಕಾಯ್ದೆ 1984ಅನ್ನು ಭ್ರಷ್ಟಾಚಾರ, ದುರಾಡಳಿತ ನಿಯಂತ್ರಿಸಲು ಆಡಳಿತ ಸುಧಾರಣಾ ಆಯೋಗದ ಶಿಫಾರಸಿನ ಮೇರೆಗೆ ರಚಿಸಲಾಗಿದೆ.

ಅದರಂತೆ ಕಾಯ್ದೆಯ ಸೆಕ್ಷನ್ 7, 9, 12 ಮತ್ತು 14ರ ಅಡಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವ, ಇಲಾಖಾ ವಿಚಾರಣೆ ನಡೆಸುವ ಹಾಗೂ ಶಿಫಾರಸು ಮಾಡುವ ಅಧಿಕಾರವನ್ನು ಲೋಕಾಯುಕ್ತ ಹೊಂದಿದೆ.

ಅದರಂತೆ ಎಸಿಬಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸಿರುವ ಮತ್ತು ದಾಖಲಿಸಲಿರುವ ಪ್ರಕರಣಗಳ ದೋಷಾರೋಪಪಟ್ಟಿಗಳನ್ನು ಸಲ್ಲಿಸುವಂತೆ ಕೋರಲಾಗಿತ್ತು. ಆದರೆ ಎಸಿಬಿ ಎಡಿಜಿಪಿ ಪಟ್ಟಿಗಳನ್ನು ಒದಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಆರೋಪಪಟ್ಟಿಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲು ಎಸಿಬಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿತ್ತು.

ಇದನ್ನೂ ಓದಿ:ದ್ವಿತೀಯ ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ: ಮೇ 24 ರಿಂದ ಎಕ್ಸಾಮ್​

ABOUT THE AUTHOR

...view details