ಬೆಂಗಳೂರು :ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ(ಕೆಎಸ್‌ಡಿಎಲ್) ತಿರಸ್ಕೃತಗೊಂಡಿರುವ ಕೆಲವು ಕಚ್ಚಾ ಸಾಮಗ್ರಿ(ಕೆಮಿಕಲ್ಸ್) ಮಾದರಿಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಹೈಕೋರ್ಟ್ ನಿರ್ದೇಶಿಸಿದೆ. ರಾಸಾಯನಿಕಗಳ ಮಾದರಿ ತಿರಸ್ಕರಿಸಿದ್ದ ಕೆಎಸ್‌ಡಿಎಲ್ ಕ್ರಮ ಪ್ರಶ್ನಿಸಿ ಕೆಮಿಕಲ್ ಕಂಪನಿಗಳಾದ ಡೆಲಿಷಿಯಾ ಕೆಮಿಕಲ್ಸ್, ಕೆಮಿಕ್ಸಿಲ್ ಕಾರ್ಪೊರೇಷನ್ ಹಾಗೂ ಬನ್ನಾರಿ ಕನ್‌ಸ್ಟ್ರಕ್ಷನ್ಸ್ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ, ಕೆಎಸ್‌ಡಿಎಲ್ ಸಾಬೂನು ಮತ್ತು ಮಾರ್ಜಕ ತಯಾರಿಕೆಗಾಗಿ ಕೆಮಿಕಲ್ ಆಯಿಲ್‌ನಂತಹ ಕಚ್ಚಾವಸ್ತುಗಳನ್ನು ಖಾಸಗಿ ಕಂಪನಿಗಳಿಂದ ಖರೀದಿಸುತ್ತದೆ. ಆದರೆ, ಅರ್ಜಿದಾರ ಕಂಪನಿಗಳು ಒದಗಿಸಿದ್ದ 15 ಕೆಮಿಕಲ್ ಮಾದರಿಗಳನ್ನು ಕೆಎಸ್‌ಡಿಎಲ್ ತಿರಸ್ಕರಿಸಿದೆ. ಆದರೆ, ದುಬಾರಿ ಬೆಲೆಗೆ ಬೇರೆ ಕಂಪನಿಗೆ ಕೆಮಿಕಲ್ ಗುತ್ತಿಗೆ ನೀಡಲಾಗಿದೆ. ಈ ಕ್ರಮದ ಹಿಂದೆ ದುರುದ್ದೇಶವಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಆದ್ದರಿಂದ, ಕೆಎಸ್‌ಡಿಎಲ್ ತಿರಸ್ಕರಿಸಿರುವ ಕೆಮಿಕಲ್‌ಗಳ ಮಾದರಿಯನ್ನು ಐಐಎಸ್‌ಸಿ ವಿಜ್ಞಾನಿಗಳಿಂದ ಪರೀಕ್ಷೆಗೊಳಪಡಿಸಲು ಆದೇಶಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಆ ಮನವಿನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ಕಂಪನಿಗಳು ಕೆಎಸ್‌ಡಿಎಲ್ ತಿರಸ್ಕರಿಸಿರುವ ಕೆಮಿಕಲ್ ಮಾದರಿಯನ್ನು ಐಐಎಸ್‌ಸಿಗೆ ಒದಗಿಸಬೇಕು. ಆ ಕೆಮಿಕಲ್‌ಗಳ ಮಾದರಿಯನ್ನು ಐಐಎಸ್‌ಸಿ ತಪಾಸಣೆ ನಡೆಸಬೇಕು. ಜತೆಗೆ, ಅದರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.