ಕರ್ನಾಟಕ

karnataka

ETV Bharat / state

ಬಿಟ್ ಕಾಯಿನ್ ಪ್ರಕರಣದ ಆರೋಪಿಯ ಸಹೋದರನಿಗೆ ಲುಕ್‌ಔಟ್ ನೋಟಿಸ್ ಹಿಂಪಡೆಯುವ ಕುರಿತು ಪರಿಶೀಲಿಸಲು ’ಇಡಿ’ಗೆ ಹೈಕೋರ್ಟ್ ಸೂಚನೆ - ಇಡಿಗೆ ಹೈಕೋರ್ಟ್​ ನಿರ್ದೇಶನ

ಶ್ರೀಕಿ ಸಹೋದರ ವಿರುದ್ಧ ಜಾರಿಯಾಗಿರುವ ಲುಕ್​ಔಟ್​ ನೋಟಿಸ್​ ಹಿಂಪಡೆಯುವಂತೆ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸುವಂತೆ ಇಡಿಗೆ ಹೈಕೋರ್ಟ್​ ನಿರ್ದೇಶನ ಮಾಡಿದೆ.

ಹೈಕೋರ್ಟ್​
ಹೈಕೋರ್ಟ್​

By

Published : Apr 6, 2023, 7:36 AM IST

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಅವರ ಸಹೋದರ ಸುದರ್ಶನ್ ರಮೇಶ್ ವಿರುದ್ಧ ದೇಶ ಬಿಟ್ಟು ಹೋಗದಂತೆ ಜಾರಿ ಮಾಡಿರುವ ಲುಕ್​ಔಟ್​ ನೋಟಿಸ್ ಹಿಂಪಡೆಯುವ ಸಂಬಂಧ ಕುರಿತಂತೆ ಸಲ್ಲಿಸಿರುವ ಮನವಿಯನ್ನು ಪರಿಶೀಲನೆ ನಡೆಸುವಂತೆ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಸುದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಆದೇಶದ ಪ್ರತಿ ಲಭ್ಯವಾದ ಆರು ವಾರಗಳಲ್ಲಿ ಪೂರ್ಣಗೊಳಿಸಬೇಕು. ಇದಕ್ಕೆ ಅರ್ಜಿದಾರ ಆರೋಪಿ ಸಂಪೂರ್ಣ ಸಹಕಾರ ನೀಡಿ ವಿಚಾರಣೆ ಪೂರ್ಣಗೊಳಿಸಲು ಅಗತ್ಯ ಮಾಹಿತಿಯನ್ನು ನೀಡಬೇಕು. ಆ ನಂತರ ಜಾರಿ ನಿರ್ದೇಶನಾಲಯ ಲುಕ್‌ಔಟ್ ನೋಟಿಸ್‌ನ್ನು ಹಿಂಪಡೆಯುವುದರ ಕುರಿತು ಪರಿಗಣಿಸಬೇಕು ಎಂದು ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ಅಪರಾಧ ಪ್ರಕರಣದಲ್ಲಿ ಆರೋಪಿಯಲ್ಲದವರು ಆರೋಪಿತರ ಸಂಪರ್ಕದಲ್ಲಿದ್ದಾರೆ ಎಂಬ ಅಂಶದ ಕುರಿತು ತನಿಖಾಧಿಕಾರಿಗಳಿಗೆ ಸಂಶಯವಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಆರೋಪಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಅಂತ್ಯ ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಅರ್ಜಿದಾರರಿಗೆ ತಿಳಿಸಿರುವ ನ್ಯಾಯಪೀಠ, ವಿದೇಶಿ ಪ್ರಾಯಣ ಮಾಡುವುದು ಸಹ ಮೂಲಭೂತ ಹಕ್ಕು ಎಂಬುದಾಗಿ ಹಲವು ಪ್ರಕರಣಗಳಲ್ಲಿ ನ್ಯಾಯಾಲಯ ತಿಳಿಸಿದೆ. ಅದನ್ನು ಇಡಿ ಪರಿಗಣಿಸಬೇಕು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರಾದ ಸುದರ್ಶನ್ ರಮೇಶ್ ಅವರು ಮೆಕಾನಿಕಲ್ ಎಂಜಿನಿಯರ್ ಆಗಿದ್ದು, ನೆದರ್‌ಲ್ಯಾಂಡ್‌ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2021ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಹಿಂದಿರುಗಿದ್ದರು. ಇದಾದ ಬಳಿಕ 2022ರ ಜನವರಿ 13ರಂದು ವಿದೇಶಕ್ಕೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ವಿಮಾನ ಹತ್ತುವುದಕ್ಕೂ ಮುನ್ನ ವಲಸೆ ಇಲಾಖೆ ಅಧಿಕಾರಿಗಳು ಅವರನ್ನು ತಡೆದಿದ್ದರು. ಇದನ್ನು ಪ್ರಶ್ನಿಸಿ ಸುದರ್ಶನ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ, ಈ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸುವಂತೆ ಸೂಚನೆ ನೀಡಿತ್ತು.

ಬಳಿಕ 2022ರ ಸೆಪ್ಟಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸುದರ್ಶನ್ ಮನವಿ ಸಲ್ಲಿಸಿ, ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತನ್ನ ಹೆಸರು ಉಲ್ಲೇಖವಾಗಿಲ್ಲ. ಹೀಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಆದರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರ ವಕೀಲುರು, ಅರ್ಜಿದಾರರು ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಪ್ರಕರಣದ ಮುಖ್ಯ ಆರೋಪಿಯ ಖಾತೆಯಿಂದ ಅಕ್ರಮವಾಗಿ ದೊಡ್ಡ ಮಟ್ಟದ ಹಣದ ವ್ಯವಹಾರಕ್ಕಾಗಿ ಸೃಷ್ಟಿಸಿಕೊಂಡಿರುವ ಇ-ಮೇಲ್ ಪಾಸ್‌ವರ್ಡ್‌ನ್ನು ತಿಳಿಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ:ಕಾವೇರಿ, ಕನ್ನಿಕೆ ನದಿ ಪಾತ್ರ ಸ್ವಚ್ಛಗೊಳಿಸಲು 15 ದಿನ ಕಾಲಾವಕಾಶ ನೀಡಿದ ಹೈಕೋರ್ಟ್

ABOUT THE AUTHOR

...view details