ಕರ್ನಾಟಕ

karnataka

ETV Bharat / state

'ಸರ್ಕಾರ ತಾತ್ಕಾಲಿಕ ಪರಿಷ್ಕೃತ ಮಾಸ್ಟರ್ ಪ್ಲಾನ್ ಹಿಂಪಡೆದರೂ ಕೈಗೊಂಡ ಕ್ರಮ ನಿರಾಕರಿಸಲಾಗದು' - ಈಟಿವಿ ಭಾರತ ಕನ್ನಡ

ಸರ್ಕಾರ ಮಾಸ್ಟರ್ ಪ್ಲಾನ್ ಹಿಂಪಡೆದುಕೊಂಡಿದ್ದರೂ ಅದಕ್ಕಾಗಿ ಕೈಗೊಳ್ಳಲಾದ ಕ್ರಮಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.

ಹೈಕೋರ್ಟ್
ಹೈಕೋರ್ಟ್

By

Published : May 5, 2023, 7:04 AM IST

ಬೆಂಗಳೂರು: ರಾಜ್ಯ ಸರ್ಕಾರ 2031ರ ತಾತ್ಕಾಲಿಕ ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ನು ಹಿಂಪಡೆದಿದ್ದರೂ ಆ ಯೋಜನೆಯಂತೆ ಕೈಗೊಂಡಿರುವ ಎಲ್ಲ ಕ್ರಮಗಳನ್ನು ನಿರಾಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬೆಂಗಳೂರಿನ ಭವಾನಿ ಯಲ್ಲಪ್ಪ ಪಾಳೇಹಾರ್ ಮತ್ತು ಮಾರ್ಕ್ ಸ್ಪೇಸಸ್ ಪ್ರೈವೆಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ಲಾನ್ ರದ್ದಾಗುವ ಮುನ್ನ ಕೈಗೊಂಡಿರುವ ಕಾಮಗಾರಿಗಳಿಗೆ ಒಪ್ಪಿಗೆ ನೀಡಬೇಕಾಗುತ್ತದೆ. ಹೀಗಾಗಿ ಅರ್ಜಿದಾರರಿಗೆ ಸ್ವಾಧೀನಾನುಭವ ಪತ್ರವನ್ನು(ಒಸಿ) ಮೇ 30ರೊಳಗೆ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್​ ನಿರ್ದೇಶಿಸಿದೆ. ನಿಯಮದಂತೆ ಅರ್ಜಿದಾರರು ಎಲ್ಲಾ ಕಾನೂನುಗಳನ್ನು ಪಾಲನೆ ಮಾಡಿ ನಕ್ಷೆಗೆ ಅನುಮೋದನೆ ಪಡೆದು ವಸತಿ ಸಂಕೀರ್ಣ ನಿರ್ಮಿಸಿದ್ದಾರೆ. ಹಾಗಾಗಿ, ಅವರಿಗೆ ಬಿಬಿಎಂಪಿ ಒಸಿಯನ್ನು ನೀಡಲೇಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಅರ್ಜಿದಾರರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿ, ಅವರು ಸಾಕಷ್ಟು ಹಣ ಹೂಡಿಕೆ ಮಾಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಸರ್ಕಾರ ಮಾಸ್ಟರ್ ಪ್ಲಾನ್‌ ಹಿಂಪಡೆದಿದೆ. ಆದರೆ, ಇದೇ ಕಾರಣ ನೀಡಿ ಒಸಿ ನೀಡದಿರುವುದು ಸರಿಯಲ್ಲ. ಅರ್ಜಿದಾರರು ಒಸಿಗೆ ಅರ್ಜಿ ಸಲ್ಲಿಸಿದ್ದ ಸಮಯದಲ್ಲಿ ಆರ್‌ಎಂಪಿ 2031 ಜಾರಿಯಲ್ಲಿತ್ತು ಮತ್ತು ಅರ್ಜಿದಾರರ ವಿರುದ್ಧ ನಕ್ಷೆ ಉಲ್ಲಂಘಿಸಿದ್ದಾರೆಂಬುದು ಸೇರಿದಂತೆ ಯಾವುದೇ ಆರೋಪಗಳಿಲ್ಲ. ಹಾಗಾಗಿ ಪಾಲಿಕೆ ಒಸಿ ನಿರಾಕರಿಸಿದ್ದ ಕ್ರಮ ಒಪ್ಪಲಾಗದು ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಅರ್ಜಿದಾರರಿಗೆ ಬಿಬಿಎಂಪಿಯೇ 2018ರ ಜ.19ರಂದು ಬೆಂಗಳೂರು ದಕ್ಷಿಣ ತಾಲೂಕಿನ ವರ್ತೂರು ಹೋಬಳಿಯ ದೊಡ್ಡಕನ್ನಹಳ್ಳಿ ಗ್ರಾಮದ ಒಂದು ಎಕರೆ 24 ಗುಂಟೆ ಜಾಗದಲ್ಲಿ ವಸತಿ ಸಂಕೀರ್ಣ ಕಟ್ಟಡದ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಿದೆ. ಆ ನಕ್ಷೆಯನ್ನು ಆರ್‌ಎಂಪಿ 2031ಗೆ ಅನುಗುಣವಾಗಿ ಅನುಮೋದಿಸಿತ್ತು. 2019ರ ಫೆ.28ರಂದು ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳಿಂದ ಎನ್‌ಒಸಿ ಪಡೆದು ಕಾಮಗಾರಿಯನ್ನೂ ಸಹ ಆರಂಭಿಸಿದ್ದರು.

ಇದನ್ನೂ ಓದಿ:ಅಪರಾಧಿಗೆ ವಿವಾಹವಾಗಲು ನೀಡಿದ್ದ ಪೆರೋಲ್ ಅವಧಿ ಮತ್ತೆ 60 ದಿನಕ್ಕೆ ವಿಸ್ತರಿಸಿದ ಹೈಕೋರ್ಟ್..

ಅರ್ಜಿದಾರರು 2022ರ ಮೇ 26ರೊಳಗೆ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸಿ ನಂತರ ಸ್ವಾಧೀನಾನುಭವ ಪತ್ರ(ಒಸಿ) ನೀಡುವಂತೆ ಅರ್ಜಿ ಸಲ್ಲಿಸಿದ್ದರು. 2022ರ ಆ.22ರಂದು ಒಸಿ ನೀಡಲು ನಿರಾಕರಿಸಿದ ಬಿಬಿಎಂಪಿ, ಸರ್ಕಾರ ಆ ಮಾಸ್ಟರ್ ಪ್ಲಾನ್ ಅನ್ನು 2022ರ ಜೂ.20ರಂದು ವಾಪಸ್ ಪಡೆದಿದೆ. ಹೀಗಾಗಿ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ವಸತಿ ಸಂಕೀರ್ಣಕ್ಕೆ ಸ್ವಾಧೀನಾನುಭವ ಪತ್ರ (ಒಸಿ) ನೀಡಲು ನಿರಾಕರಿಸಿ ಬಿಬಿಎಂಪಿ 2022ರ ಆ.22ರಂದು ಹಿಂಬರಹ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮಟ್ಟಿಲೇರಿದ್ದರು.

ಇದನ್ನೂ ಓದಿ:ತಂದೆಯ ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್

ಸುಪ್ರೀಂ ತೀರ್ಪು ಹಿನ್ನಡೆಯಲ್ಲ, ಪ್ರತಿಭಟನೆ ಮುಂದುವರಿಯುತ್ತದೆ: ಕುಸ್ತಿಪಟುಗಳ ಹೇಳಿಕೆ

ABOUT THE AUTHOR

...view details