ಬೆಂಗಳೂರು: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ನಿಗದಿ ಪಡಿಸಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಯಿದ್ದವರನ್ನು ಮಾತ್ರ ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೆ.ವಿ. ರಂಜಿತ್ ನಾಯಕ್ ಸೇರಿದಂತೆ ಮತ್ತಿತರ 50ಕ್ಕೂ ಅಧಿಕ ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಿರುವ ನ್ಯಾ. ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ, ವಿಶ್ವವಿದ್ಯಾಲಯ ಅನುದಾನ ಆಯೋಗ ನಿಗದಿ ಪಡಿಸಿರುವ ಅರ್ಹತೆ ಮತ್ತು ಎಲ್ಲ ನಿಯಮಗಳನ್ನು ಪರಿಗಣಿಸಿಯೇ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ.
ಅಲ್ಲದೆ, ಪ್ರಸ್ತುತ ನಡೆದಿರುವ ನೇಮಕಗಳಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಆದರೆ, ಮುಂದಿನ ನೇಮಕಾತಿಗೆ ವೇಳೆ ಯುಜಿಸಿಯ ನಿಯಮ ಪರಿಗಣಿಸಲು ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ. 2022ರ ಜ.14 ರಂದು ವಿಶ್ವವಿದ್ಯಾಲಯ ಅನುದಾನ ಆಯೋಗ ನಿಗದಿಪಡಿಸಿದ ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದಿದ್ದ ಅಭ್ಯರ್ಥಿಗಳೂ ಸಹ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ ಆ ವಿದ್ಯಾರ್ಹತೆಗಳನ್ನು ಅತಿಥಿ ಉಪನ್ಯಾಸಕರಾಗಿ ನೇಮಕವಾದ ಬಳಿಕ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕು.
ಒಂದು ವೇಳೆ ಆ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ ನಿಗದಿ ಪಡಿಸಿದ ಅರ್ಹತೆ ಪಡೆಯದಿದ್ದಲ್ಲಿ ಅಂತಹವರ ಅತಿಥಿ ಉನ್ಯಾಸಕರ ಹುದ್ದೆಗೆ ನೇಮಕ ಮಾಡುವುದಕ್ಕೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗುವುದು ಎಂದು ಸರ್ಕಾರ ಆದೇಶಿಸಿತ್ತು. ಅಲ್ಲದೆ, ನೇಮಕ ಮಾಡುವ ಸಂದರ್ಭದಲ್ಲಿ ಅಂತಹ ಅಭ್ಯರ್ಥಿಗಳಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಕೃಪಾಂಕ ಪಡೆದುಕೊಳ್ಳಬಹುದು ಎಂದು 2022ರ ಜನವರಿ 17ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಅರ್ಜಿದಾರರ ಅಭ್ಯರ್ಥಿಗಳು ಪ್ರಶ್ನಿಸಿದ್ದರು.