ಬೆಂಗಳೂರು:ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ 25 ಉಪಾಧಿವಂತರಿಗೆ ಪೂಜಾ ಹಕ್ಕು ನೀಡಿ ಸ್ಥಳೀಯ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಮಧ್ಯಂತರ ಅದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
2020ರ ಫೆ.19ರಂದು ಉಪಾಧಿವಂತರಿಗೆ ಪೂಜಾ ಹಕ್ಕು ನೀಡಿ ಕಾರವಾರ ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ಇಂದಿರೇಶ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ತೀರ್ಪಿನಲ್ಲಿ ವಿಚಾರಣಾ ನ್ಯಾಯಾಲಯ ತನ್ನ ವಿವೇಚನಾ ಅಧಿಕಾರವನ್ನು ಸಮಪರ್ಕವಾಗಿ ಬಳಸಿಲ್ಲ. ತಾತ್ಕಾಲಿಕ ಆದೇಶ ನೀಡುವಾಗ ತಪ್ಪು ತತ್ವಗಳನ್ನು ಪಾಲನೆ ಮಾಡಲಾಗಿದೆ. ಹಾಗಾಗಿ ಉನ್ನತ ನ್ಯಾಯಾಲಯ ಹಸ್ತಕ್ಷೇಪ ಮಾಡಲೇಬೇಕಿದೆ ಎಂದು ಅಭಿಪ್ರಾಯಪಟ್ಟು, ಮಧ್ಯಂತರ ಆದೇಶ ರದ್ದುಗೊಳಿಸಿದೆ.
ಪ್ರಕರಣದ ಹಿನ್ನೆಲೆ :
2008ರಲ್ಲಿ ಗೋಕರ್ಣದ ಐತಿಹಾಸಿಕ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನವನ್ನು ಸರ್ಕಾರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಆ ಬಳಿಕ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದ ಉಪಾಧಿವಂತರನ್ನು ಬದಲಿಸಿ, ಹೊಸದಾಗಿ ಅರ್ಜಿಗಳನ್ನು ಕರೆದು ಆಗಮಶಾಸ್ತ್ರದ ಬಗ್ಗೆ ಜ್ಞಾನ ಹಾಗೂ ಅನುಭವ ಆಧರಿಸಿ ಕೆಲವರನ್ನು ಉಪಾಧಿವಂತರನ್ನಾಗಿ ನೇಮಿಸಲಾಗಿತ್ತು. ಅರ್ಹತೆ ಇಲ್ಲದವರನ್ನು ತಿರಸ್ಕರಿಸಲಾಗಿತ್ತು. ಈ ಆಯ್ಕೆ ಸಂದರ್ಭದಲ್ಲಿ ಮೊದಲು ಅಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಉಪಾಧಿವಂತರು ಅರ್ಜಿ ಸಲ್ಲಿಸಿರಲಿಲ್ಲ. ಅಲ್ಲದೆ, ಅವರು ಉಪಾಧಿವಂತರಾಗಿ ಮುಂದುವರಿದಿರಲೂ ಇಲ್ಲ.
ಆದರೆ, 6 ವರ್ಷಗಳ ನಂತರ 25 ಉಪಾಧಿವಂತರು 2014ರಲ್ಲಿ ಕಾರವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪಾರಂಪರಿಕ ಪೂಜಾ ಹಕ್ಕು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕಾರವಾರ ನ್ಯಾಯಾಲಯ ಉಪಾಧಿವಂತರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿತ್ತು. 2020 ರ ಫೆ.19 ರಂದು ಮಧ್ಯಂತರ ಆದೇಶ ನೀಡಿ, ಅರ್ಜಿದಾರರ ಪೂಜಾ ಹಕ್ಕಿನಲ್ಲಿ ಮಧ್ಯಪ್ರವೇಶಿಸದಂತೆ ಮಠಕ್ಕೆ ನಿರ್ಬಂಧ ವಿಧಿಸಿತ್ತು. ಇದನ್ನು ರಾಮಚಂದ್ರಾಪುರ ಮಠ ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.