ಬೆಂಗಳೂರು: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ ನಿರ್ಮಿಸಿರುವ ಬಸವೇಶ್ವರ ಪ್ರತಿಮೆ, ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನದ ಕುರಿತು ಸಂಪೂರ್ಣ ಮಾಹಿತಿ ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮಠದ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ಅರ್ಜಿಯ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿ, ಮುರುಘಾ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ದುರದೃಷ್ಟವಶಾತ್ ಈಗಿನ ಪೀಠಾಧಿಪತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹಾಗೂ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತಕ್ಕೆ ವ್ಯತ್ಯಯ ಉಂಟಾಗಬಾರದು ಎಂಬ ಕಾರಣಕ್ಕೆ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದರು ವಿವರಿಸಿದರು.
ಅಲ್ಲದೆ, ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ ಬಸವ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ಸರ್ಕಾರವು ಕಾಲಕಾಲಕ್ಕೆ ಕೋಟ್ಯಂತರ ರೂಪಾಯಿಗಳ ಅನುದಾನ ನೀಡಿದೆ. 2022ರ ಸೆಪ್ಟೆಂಬರ್ 15ರಂದು ಸರ್ಕಾರ 10 ಕೋಟಿ ರೂ.ಗಳನ್ನು ನೀಡಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಎಷ್ಟು ಅನುದಾನ ನೀಡಿದೆ. ಅದಕ್ಕೆ ಯಾವುದಾದರೂ ಷರತ್ತು ವಿಧಿಸಲಾಗಿದಿಯೇ ಎಂಬುದನ್ನು ತಿಳಿಸಲು ಸೂಚನೆ ನೀಡಿತು. ವಾದ ಮುಂದುವರೆಸಿದ ನಾವದಗಿ, ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಆರ್ಥಿಕ ನೆರವಿನ ಅಂಶಗಳೂ ಅಡಗಿವೆ. ಆಡಳಿತಾಧಿಕಾರಿ ನೇಮಕಕ್ಕೂ ಮುನ್ನ ಮುಖ್ಯಮಂತ್ರಿಗಳು ನೂರು ಬಾರಿ ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ಮಠದ ಆಸ್ತಿ ಸಂರಕ್ಷಣೆ ಮತ್ತು ಭಕ್ತರ ಹಿತಾಸಕ್ತಿ ಕಾಪಾಡುವ ಉದ್ದೇಶ ಅಡಗಿದೆ ಎಂದು ವಿವರಿಸಿದರು.