ಬೆಂಗಳೂರು: ನ್ಯಾಯಾಲಯ ಆದೇಶ ನೀಡಿದ ನಂತರವೂ ನಿವೃತ್ತ ಸೇನಾಧಿಕಾರಿಯೊಬ್ಬರಿಗೆ ಜಮೀನು ಮಂಜೂರು ಮಾಡದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಹಶೀಲ್ದಾರ್ ಎಸ್.ರಶ್ಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಲು ಮುಂದಾಗಿದೆ.
ಈ ಕುರಿತು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಸ್.ಕೆ.ಭಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಆರೋಪಿ ಅಧಿಕಾರಿ ರಶ್ಮಿ, ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಮಾ. 31ರಂದು ನ್ಯಾಯಾಂಗ ನಿಂದನೆ ಅಡಿ ಆರೋಪ ನಿಗದಿ ಮಾಡಲಾಗುವುದು. ಅಂದು ಆರೋಪಿ ಅಧಿಕಾರಿ ರಶ್ಮಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಿರಬೇಕು ಎಂದು ನಿರ್ದೇಶಿಸಿತು.
ಇದಕ್ಕೂ ಮುನ್ನ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಸೇನೆಯಲ್ಲಿ ಸೇವೆ ಸಲ್ಲಿಸಿದವರ ಬಗ್ಗೆ ಸರ್ಕಾರಿ ಅಧಿಕಾರಿಗಳು ಕನಿಷ್ಠ ಕಾಳಜಿ ಹೊಂದಿರಬೇಕು. ಸೈನಿಕರು ಯಾವುದಾದರೂ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೆ, ಅದನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಆದರೆ, ಈ ಪ್ರಕರಣದಲ್ಲಿ ನಿವೃತ್ತ ಸೇನಾಧಿಕಾರಿಯನ್ನು ಕಚೇರಿಗೆ ಮೇಲಿಂದ ಮೇಲೆ ಅಲೆಯುವಂತೆ ಮಾಡಲಾಗಿದೆ. ಸೇನೆಗೆ ಸೇವೆ ಸಲ್ಲಿಸಿದವರನ್ನು ಹೀಗೆ ನಡೆಸಿಕೊಳ್ಳಬಾರದು ಎಂದು ಬೇಸರ ವ್ಯಕ್ತಪಡಿಸಿತು.
ಓದಿ : ಸಾಲ ನಿಷೇಧ ಗಡುವು ವಿಸ್ತರಣೆ ಆದೇಶಕ್ಕೆ ಸುಪ್ರೀಂ ನಕಾರ : ಕೋರ್ಟ್ ತೀರ್ಪು ಸ್ವಾಗತಿಸಿದ ಉದಯ್ ಕೊಟಾಕ್
ಅಲ್ಲದೆ, ಅರ್ಜಿದಾರರಿಗೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆದು ಖಾಸಗಿ ಸಂಸ್ಥೆಗೆ ಕೊಡಲಾಗಿದೆ. ದೇಶ ಸೇವೆ ಬಗ್ಗೆ ಸರ್ಕಾರಿ ಅಧಿಕಾರಿಗಳಲ್ಲಿ ಗೌರವ ಇದ್ದಿದ್ದರೆ, ಬದಲಿ ಜಾಗ ಮಂಜೂರಿಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಬಂಟ್ವಾಳ ಹಾಲಿ ತಹಶೀಲ್ದಾರ್ ರಶ್ಮಿ, ಹೈಕೋರ್ಟ್ ಆದೇಶದ ಬಗ್ಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ಆರೋಪಿ ಅಧಿಕಾರಿಯನ್ನು ಜೈಲಿಗೆ ಕಳುಹಿಸಲು ಇದಕ್ಕಿಂತ ಸೂಕ್ತ ಪ್ರಕರಣ ಬೇಕಾಗಿಲ್ಲ. ನ್ಯಾಯಾಂಗ ನಿಂದನೆ ಅರ್ಜಿ ದಾಖಲಾದ ಬಳಿಕ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಆ ಸಂಬಂಧ ಯಾವುದೇ ಆದೇಶ ಹೊರಡಿಸದೇ ಇರುವುದರಿಂದ ವಿಳಂಬವಾಗಿದೆ ಎಂದು ಸಬೂಬು ಹೇಳುತ್ತಾರೆ. ಈ ಹಂತದಲ್ಲಿ ಇವೆಲ್ಲ ಒಪ್ಪಲು ಸಾಧ್ಯವಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಪ್ರಕರಣದ ಹಿನ್ನೆಲೆ: ಲೆಫ್ಟಿನೆಂಟ್ ಕರ್ನಲ್ ಎಸ್.ಕೆ.ಭಟ್ ಅವರಿಗೆ 2001ರಲ್ಲಿ ಸೇನಾ ಕೋಟಾದಡಿ ಮಂಗಳೂರಿನ ಕೈರಮಂಗಲ ಗ್ರಾಮದ ಸರ್ವೆ ನಂಬರ್ 110/6ರಲ್ಲಿ 4 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಅವರ ವಾರ್ಷಿಕ ಆದಾಯ ಹೆಚ್ಚಿದೆ ಎಂಬ ಕಾರಣಕ್ಕೆ 2004ರಲ್ಲಿ ಸರ್ಕಾರ ಜಮೀನು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಭಟ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರದ ಆದೇಶ ರದ್ದುಪಡಿಸಿತ್ತು. ಆದರೂ ಬಂಟ್ವಾಳ ತಹಶೀಲ್ದಾರ್ ಜಮೀನು ಮಂಜೂರಾತಿ ಆದೇಶವನ್ನು ಮರುಸ್ಥಾಪಿಸಿರಲಿಲ್ಲ. ಈ ಮಧ್ಯೆ ಎಸ್.ಕೆ.ಭಟ್ ಅವರಿಗೆ ಮಂಜೂರು ಮಾಡಿದ್ದ ಜಮೀನನನ್ನು ಇನ್ಫೋಸಿಸ್ ಸಂಸ್ಥೆಗೆ ನೀಡಲಾಗಿತ್ತು. ಬದಲಿ ಜಮೀನು ಮಂಜೂರು ಮಾಡುವುದಕ್ಕೂ ವಿಳಂಬ ಮಾಡಿದ ಹಿನ್ನೆಲೆ ಭಟ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲ ಒ.ಶಿವರಾಮ ಭಟ್ ವಾದಿಸಿದರು.