ಬೆಂಗಳೂರು: ವಿಕಲಚೇತನರೊಬ್ಬರಿಗೆ ಆಶ್ರಯ ಯೋಜನೆಯಡಿ 10 ವರ್ಷಗಳ ಹಿಂದೆ ಮಂಜೂರು ಮಾಡಿದ ನಿವೇಶನವನ್ನು ಬಿಬಿಎಂಪಿಯು ಈವರೆಗೂ ಸ್ವಾಧೀನಕ್ಕೆ ನೀಡದೆ ಸತಾಯಿಸಿದ ಪ್ರಕರಣದ ಸಂಬಂಧ ಹೈಕೋರ್ಟ್ ಪಾಲಿಕೆ ಮುಖ್ಯ ಆಯುಕ್ತರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಹೈಕೋರ್ಟ್ ಆದೇಶ ಪ್ರಕಟಿಸಿ ಮೂರು ವರ್ಷ ಕಳೆದಿದ್ದರೂ ನಿವೇಶನವನ್ನು ತನ್ನ ಸ್ವಾಧೀನಕ್ಕೆ ನೀಡದ ಬಿಬಿಎಂಪಿಯ ವಿರುದ್ಧ ಅರ್ಜುನ್ ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ ಪಾಲಿಕೆ ಆಯುಕ್ತರನ್ನ ತರಾಟೆಗೆ ತೆಗೆದುಕೊಂಡಿತು.
ಕೋರ್ಟ್ ನಿರ್ದೇಶನದಂತೆ ವಿಚಾರಣೆಗೆ ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಚಾಟಿ ಬೀಸಿದ ಪೀಠ, ಅರ್ಜಿದಾರರು ಅಂಗವೈಕಲ್ಯದಿಂದ ನರಳುತ್ತಿದ್ದಾರೆ. ಬಡ ಕುಟುಂಬಕ್ಕೆ ಸೇರಿದ ಅವರಿಗೆ 2011ರಲ್ಲಿಯೇ ನಿವೇಶನ ಮಂಜೂರು ಮಾಡಲಾಗಿದೆ.
ಆದರೆ, ಈವರೆಗೆ ಸ್ವಾಧೀನಕ್ಕೆ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿ. ನಿವೇಶನವನ್ನು ಅರ್ಜಿದಾರ ಸ್ವಾಧೀನಕ್ಕೆ ನೀಡುವಂತೆ ಹೈಕೋರ್ಟ್ ತೀರ್ಪು ಪ್ರಕಟಿಸಿ 3 ವರ್ಷ ಕಳೆದಿವೆ. ಆದರೆ, ಈವರೆಗೆ ಆದೇಶ ಪಾಲಿಸಿಲ್ಲವೆಂದರೆ ಹೈಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲವೇ? ಎಂದು ಮುಖ್ಯ ಆಯುಕ್ತರನ್ನು ಪ್ರಶ್ನಿಸಿತು.
ಬೇಷರತ್ ಕ್ಷಮೆ ಯಾಚಿಸಿದ ಬಿಬಿಎಂಪಿ ಆಯುಕ್ತರು, ಕೂಡಲೇ ನಿವೇಶನವನ್ನು ಅರ್ಜಿದಾರರ ಸ್ವಾಧೀನಕ್ಕೆ ನೀಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪೀಠ ಪ್ರತಿಕ್ರಿಯಿಸಿ, ನಿಮ್ಮ ಕೆಲಸಗಳ ಬಗೆಗಿನ ಮಾಧ್ಯಮಗಳ ವರದಿಯನ್ನು ನಾವು ಗಮನಿಸಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪಾಲಿಸದೇ ಇರುವುದು ಸರಿಯಲ್ಲ.
ಅಂಗವಿಕಲ ವ್ಯಕ್ತಿಯು ನಿವೇಶನಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು. ಕೂಡಲೇ ಆತನ ಸ್ವಾಧೀನಕ್ಕೆ ನಿವೇಶನ ನೀಡಬೇಕು ಎಂದು ಸೂಚಿಸಿತು. ಅಲ್ಲದೆ, ಒಂದೊಮ್ಮೆ ಆದೇಶ ಪಾಲಿಸದಿದ್ದರೆ ಕೋರ್ಟ್ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿ ವಿಚಾರಣೆ ಮುಂದೂಡಿತು.
ವಿಕಲಚೇತನರಾದ ಅರ್ಜುನ್ ಸಾ ಎಂಬುವರು ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡುವಂತೆ 2003ರಲ್ಲಿ ಎಂಟು ಸಾವಿರ ಹಣವನ್ನು ಪಾವತಿ ಮಾಡಿದ್ದರು. ಅದಾದ ಎಂಟು ವರ್ಷಗಳ ನಂತರ 2011ರಲ್ಲಿ ಬೆಂಗಳೂರು ಉತ್ತರ ತಾಲೂಕಿನ ಹಳೆ ಯಲಹಂಕದ ಸಿಂಗಾಪುರ ಗ್ರಾಮದಲ್ಲಿ 352 ಸಂಖ್ಯೆಯ ನಿವೇಶನವನ್ನು ಬಿಬಿಎಂಪಿ ಮಂಜೂರು ಮಾಡಿತ್ತಾದರೂ ಸ್ವಾಧೀನಕ್ಕೆ ನೀಡಿರಲಿಲ್ಲ.
ಇದರಿಂದ ಅರ್ಜುನ್ ಸಾ ರಾಜ್ಯ ವಿಕಲಚೇನತರ ಹಕ್ಕುಗಳ ರಕ್ಷಣೆ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಿದ್ದರು. ಆಯುಕ್ತರು, ನಿವೇಶನ ಸ್ವಾಧೀನಕ್ಕೆ ನೀಡುವಂತೆ 2014ರಲ್ಲಿ ಆದೇಶಿಸಿದ್ದರೂ ಪಾಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ 2015ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ನಿವೇಶನವನ್ನು ಅರ್ಜಿದಾರರ ಸ್ವಾಧೀನಕ್ಕೆ ನೀಡುವಂತೆ 2018ರ ಏ.13ರಂದು ಆದೇಶಿಸಿತ್ತು. ಈ ಆದೇಶವನ್ನೂ ಪಾಲಿಸದಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.