ಕರ್ನಾಟಕ

karnataka

ETV Bharat / state

ಹಂಪಿಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಹೈಕೋರ್ಟ್ ಸಲಹೆ

ಐತಿಹಾಸಿಕ ತಾಣ ಹಂಪಿಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸಲಹೆ ನೀಡಿದೆ.

ಸರ್ಕಾರಕ್ಕೆ ಹೈಕೋರ್ಟ್ ಸಲಹೆ
ಸರ್ಕಾರಕ್ಕೆ ಹೈಕೋರ್ಟ್ ಸಲಹೆ

By ETV Bharat Karnataka Team

Published : Nov 20, 2023, 8:47 PM IST

ಬೆಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕರ್ನಾಟಕ ಹಿಂದುಳಿದಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಉತ್ತಮಗೊಳಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಸುತ್ತಮುತ್ತಲಿನ ಸಂರಕ್ಷಿತ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡಗಳ ತೆರವು ಸಂಬಂಧ 2016ರಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಮೌಖಿಕವಾಗಿ ಈ ಸಲಹೆ ನೀಡಿದೆ.

ಅಲ್ಲದೇ, ಪ್ರವಾಸಿ ತಾಣಗಳಲ್ಲಿ ಉತ್ತಮ ಮೂಲಸೌಕರ್ಯ ವೃದ್ಧಿಯಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಿಂದ ಸರ್ಕಾರಕ್ಕೆ ಆದಾಯವೂ ವೃದ್ಧಿಯಾಗಲಿದೆ. ಆದ್ದರಿಂದ ಈ ಸಲಹೆಯನ್ನು ಸರ್ಕಾರಕ್ಕೆ ತಲುಪಿಸಬೇಕು ಎಂದು ರಾಜ್ಯ ಅಡ್ವೊಕೇಟ್ ಜನರಲ್‌ಗೆ ಸೂಚನೆ ನೀಡಿದೆ. ಅಲ್ಲದೇ, ಕರ್ನಾಟಕ 1990ರ ದಶಕದಲ್ಲಿ ಪ್ರವಾಸೋದ್ಯಮದಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು. ಇದೀಗ ಬಹುಶಃ ಮಧ್ಯಪ್ರದೇಶ ಮೊದಲ ಸ್ಥಾನದ್ಲಲಿರಬೇಕು. ಐತಿಹಾಸಿಕ ಹಂಪಿಯಲ್ಲಿ ಸದ್ಯ ಇರುವ ಮೂಲ ಸೌಕರ್ಯ ಪ್ರವಾಸಿಗರಿಗೆ ಸಾಲುತ್ತಿಲ್ಲ, ಅಲ್ಲಿನ ಮೂಲಸೌಕರ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉನ್ನತೀಕರಿಸಬೇಕಿದೆ. ಈ ಮೂಲಸೌಕರ್ಯ ಕೊರತೆ ಸಮಸ್ಯೆ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಪೀಠ ತಿಳಿಸಿತು.

ವಿಶ್ವ ಪಾರಂಪರಿಕ ತಾಣಗಳಲ್ಲಿ ಮೂಲಸೌಕರ್ಯ ವೃದ್ಧಿ ಸಂಬಂಧ ಸರ್ಕಾರ ಸದಾ ತಜ್ಞರ ಜತೆ ಸಮಾಲೋಚನೆ ನಡೆಸುತ್ತಿರಬೇಕಾಗುತ್ತದೆ. ಸಣ್ಣ ರಾಷ್ಟ್ರಗಳೂ ಸಹ ತಮ್ಮ ಬಜೆಟ್‌ನಲ್ಲಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಮೀಸಲಿರಿಸುತ್ತವೆ. ಹಲವು ದೇಶಗಳು ಆದಾಯಕ್ಕೆ ಪ್ರವಾಸಿ ತಾಣಗಳನ್ನೇ ನೆಚ್ಚಿಕೊಂಡಿದೆ ಎಂದು ತಿಳಿಸಿದ ನ್ಯಾಯಪೀಠ, ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಪ್ರವಾಸಿ ತಾಣಗಳಿದ್ದು, ಅವುಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ಅತ್ಯುತ್ತಮ ಪದ್ಧತಿಗಳನ್ನು ಸರ್ಕಾರ ರೂಢಿಸಿಕೊಳ್ಳಬೇಕು.

ಈ ರೀತಿ ಪ್ರವಾಸಿ ಸ್ಥಳಗಳಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ನೀಡಿದರೆ ಹೆಚ್ಚಿನ ಜನರು ಆ ತಾಣಗಳಿಗೆ ಭೇಟಿ ನೀಡುತ್ತಾರೆ, ಆಗ ಸಹಜವಾಗಿಯೇ ಆದಾಯ ಹೆಚ್ಚುತ್ತದೆ ಎಂದು ಪೀಠ ತಿಳಿಸಿತು.

ಹಂಪಿ ದೇವಾಲಯದ ಬಳಿ ಭೂಸ್ವಾದೀನ ರದ್ದು:ಹಂಪಿಯಲ್ಲಿರುವ ಉಗ್ರ ನರಸಿಂಹ ಮತ್ತು ಬಡವಿಲಿಂಗ ದೇವಾಲಯಗಳ ಸಂರಕ್ಷಿತ ಸ್ಮಾರಕಗಳಿರುವ ಜಾಗದಲ್ಲಿ ಮೂಲಸೌಕರ್ಯ ಸುಧಾರಣೆಗೆ ಸುಮಾರು ಏಳು ಎಕರೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.

ಹೊಸಪೇಟೆ ತಾಲೂಕಿನ ಕೃಷ್ಣಾಪುರ ಮತ್ತು ಕಮಲಾಪುರ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದನ್ನು ಪ್ರಶ್ನಿಸಿ, 2007ರಲ್ಲಿ ನಿಡಶೇಷಿ ವೀರಣ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ.2ರಂದು ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಧಾರವಾಡ ನ್ಯಾಯಪೀಠ, ಭೂಸ್ವಾಧೀನ ಮಾಡಿಕೊಂಡು 2006ರ ಏ. 5 ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು.

ಇದನ್ನೂ ಓದಿ:ಐತಿಹಾಸಿಕ ತಾಣ ಹಂಪಿಗೆ ಒಲಿದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ರಾಷ್ಟ್ರೀಯ ಪ್ರಶಸ್ತಿ

ABOUT THE AUTHOR

...view details