ಬೆಂಗಳೂರು: ಬ್ಲಾಕ್ ಅಂಡ್ ವೈಟ್ ಕೇಸ್ನಲ್ಲಿ ಇತ್ತೀಚೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದ ಪುಟ್ಟೇನಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈಗಾಗಲೇ ಈ ಹವಾಲ ದಂಧೆ ಶಂಕೆ ಮೇರೆಗೆ ಪೊಲೀಸರು ಐಟಿ ಮತ್ತು ಇಡಿಗೆ ಪತ್ರದ ಮುಖೇನ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದುವರೆಗೂ 800 ಬ್ಯಾಂಕ್ ಅಕೌಂಟ್ ಗಳು 70 ಕೋಟಿ ಠೇವಣಿ ಹಣ ಚಲಾವಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಅಷ್ಟು ಅಕೌಂಟ್ ಫ್ರೀಜ್ ಆದರೂ ಸಹ ಇಲ್ಲಿಯವರೆಗೆ ಒಬ್ಬ ಅಕೌಂಟ್ ಹೋಲ್ಡರ್ ಮಾತ್ರ ತನ್ನ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಠಾಣೆ ಮೆಟ್ಟಿಲು ಹತ್ತಿದ್ದಾರೆ. ಇನ್ನುಳಿದವರಾರೂ ಕೂಡ ಈ ಬಗ್ಗೆ ದೂರನ್ನ ದಾಖಲಿಸದೇ ಇರೋದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:ನಕಲಿ ಅಂಕಪಟ್ಟಿ ಸೃಷ್ಟಿಸಿ ಸ್ಟೂಡೆಂಟ್ ವೀಸಾದಡಿ ವಿದೇಶಕ್ಕೆ ಹಾರಲು ನೆರವು: ಬೆಂಗಳೂರಲ್ಲಿ ಇಬ್ಬರ ಬಂಧನ
ಹೇಗಿದೆ ಇವರ ವ್ಯವಹಾರ :
ಕೆಲ ದಿನಗಳ ಹಿಂದೆ ಪುಟ್ಟೆನಹಳ್ಳಿ ಪೊಲೀಸರು ಈ ಪ್ರಕರಣದಲ್ಲಿ ಪೈಜಲ್, ಫಜಲ್, ಸಾಲಿಹ್ ಮತ್ತು ಮಾನಫ್ನ್ನ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಸ್ಫೋಟಕ ಮಾಹಿತಿ ಹೊರ ಬಂದಿತ್ತು. ಒಬ್ಬೊಬ್ಬ ಆರೋಪಿಯೂ ದಿನಕ್ಕೆ 30 ರಿಂದ 35 ಲಕ್ಷ ಹಣವನ್ನ ಬೇರೆ ಬೇರೆ ಅಕೌಂಟ್ಗೆ ಡೆಪಾಸಿಟ್ ಮಾಡಿರುವುದಾಗಿ ಹೇಳಿದ್ದಾರೆ.
ಪ್ರಮುಖ ವಿಷಯ ಎಂದರೆ ಇವರು ಎಟಿಎಂನ ಡೆಪಾಸಿಟ್ ಮೆಷಿನ್ ಮೂಲಕ ಮಾತ್ರ ನಿತ್ಯ ಹಣ ಠೇವಣಿ ಮಾಡುತ್ತಿದ್ದರಂತೆ. ಹಾಗೆ ಇವರು ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಕೋಡ್ವರ್ಡ್ ರಚಿಸಿ ಆ ಮೂಲಕ ತಮ್ಮ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಕೋಡ್ ಅಕೌಂಟ್ ಮಾಹಿತಿ ಹಾಕಿ ಇದರ ಆಪರೇಟರ್ ಒಂದು ಕೋಡ್ ವರ್ಡ್ ಕಳಿಸುತ್ತಿದ್ದರಂತೆ. ಅವರು ಹೇಳಿದ ವ್ಯಕ್ತಿಯನ್ನ ಸಂಪರ್ಕಿಸಿದರೆ ಆ ಕಡೆಯಿಂದ ಹಣ ಕೊಡುತ್ತಿದ್ದರಂತೆ. ನಂತರ ಆ ಹಣವನ್ನು ಆಪರೇಟರ್ ನೀಡಿದ ಅಕೌಂಟ್ ಗೆ ಪಾವತಿ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ, ಈ ಕೆಲಸಕ್ಕೆ ಇವರು 40ರಿಂದ 60 ಸಾವಿರ ಸಂಬಳ ಪಡೆಯುತ್ತಿದ್ದರಂತೆ.
ಆರೋಪಿಗಳು ಸುಮಾರು 25 ಬ್ಯಾಂಕ್ ನ ವಿವಿಧ ಖಾತೆಗಳ ಮುಖಾಂತರ ಹಣದ ವರ್ಗಾವಣೆ ನಡೆಸಿರೋದು ಬೆಳಕಿಗೆ ಬಂದಿದೆ. ನಾಲ್ವರು ಬಂಧಿತರಾಗುತ್ತಿದ್ದಂತೆ ಕಿಂಗ್ ಫಿನ್ ರಿಯಾಜ್, ಮಾನಸ್ ಸೌದಿಗೆ ಎಸ್ಕೇಪ್ ಆಗಿದ್ದಾರೆ. ದುಬೈನಿಂದ ಈ ದಂಧೆ ಅಪರೇಟ್ ಆಗ್ತಿರೋದು ಬೆಳಕಿಗೆ ಬಂದಿದೆ.