ಬೆಂಗಳೂರು: ಧರ್ಮಕ್ಕೋಸ್ಕರ ಮನುಷ್ಯ ಅಲ್ಲ. ಮನುಷ್ಯನಿಗಾಗಿ ಧರ್ಮ ಇದೆ. ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ ಶಸ್ತ್ರ ಹಿಡಿಯದೇ ದೈವತ್ವಕ್ಕೆ ಏರಿದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ದ್ವೇಷಿಸುವುದು ಅಧರ್ಮ. ಮನುಷ್ಯ ದ್ವೇಷ- ಅಧರ್ಮದ ವಿರುದ್ಧವೇ ಕೃಷ್ಣ ಕೈಯಲ್ಲಿ ಶಸ್ತ್ರ ಹಿಡಿಯದೇ ಹೋರಾಡಿ ಧರ್ಮ ಸ್ಥಾಪನೆ ಮಾಡಿದ ಎಂದರು.
ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ಕೂಡ ಮನುಷ್ಯ ಪ್ರೀತಿಯ ಸಮಾನತೆಯ ಸಮಾಜ ಸೃಷ್ಟಿ ಆಗಬೇಕು ಎನ್ನುವುದಾಗಿತ್ತು. ಸ್ವತಂತ್ರ ಭಾರತಕ್ಕೆ ಸಂವಿಧಾನ ಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವೂ ಇದೇ ಆಗಿತ್ತು. ಪ್ರತಿಯೊಬ್ಬರಿಗೂ ಅವರವರ ಇಷ್ಟದ ಧರ್ಮವನ್ಮು ಒಪ್ಪಿಕೊಳ್ಳುವ, ಆಚರಿಸುವ ಸ್ವಾತಂತ್ರ್ಯವನ್ನು ನೀಡಿತು. ಜಾತಿ, ಧರ್ಮ ಆಧಾರಿತ ತಾರತಮ್ಯ ಮತ್ತು ಅಸಮಾನತೆ ಸಂವಿಧಾನಬಾಹಿರ ಎಂದು ಅಂಬೇಡ್ಕರ್ ಘೋಷಿಸಿದರು. ಹೀಗಾಗಿ ಸಂವಿಧಾನವನ್ನು ರಕ್ಷಿಸುವವರ ಕೈಯಲ್ಲಿ ಅಧಿಕಾರ ಇರಬೇಕು. ಸಂವಿಧಾನ ವಿರೋಧಿಗಳ ಕೈಗೆ ದೇಶದ ಅಧಿಕಾರವನ್ನು ನೀಡಿ ಪರಿತಪಿಸಬೇಡಿ ಎಂದು ಕಿವಿಮಾತು ಹೇಳಿದರು.
ಯಾದವ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ತಾರತಮ್ಯದಿಂದ ಹೊರಗೆ ಬರಬಹುದು. ಶಿಕ್ಷಣದ ಮೂಲಕ ಅಸಮಾನತೆಯನ್ನು ತೊಡೆದು ಹಾಕಬಹುದು. ಯಾದವ ಸಮುದಾಯದ ಯಾರೊಬ್ಬರೂ ಶಾಸಕರಾಗಿ ಗೆಲ್ಲದ ಕಾರಣದಿಂದ ನಾನು ಈ ಸಮುದಾಯಕ್ಕೆ ಸೇರಿದ ನಾಗರಾಜ ಯಾದವರನ್ನು ಕರೆದು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆ. ಇದೇ ರೀತಿ ಸಮುದಾಯದ ಹಲವು ಮಂದಿಗೆ ನಾನಾ ರೀತಿಯ ರಾಜಕೀಯ ಪ್ರಾತಿನಿಧ್ಯ , ಅವಕಾಶಗಳನ್ನು ನಾನು ಒದಗಿಸಿದ್ದೇನೆ ಎಂದರು.