ಬೆಂಗಳೂರು:ಚುನಾವಣಾ ನಾಮಪತ್ರದಲ್ಲಿ ಆಸ್ತಿ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಹೈಕೋರ್ಟ್ ಸಮನ್ಸ್ ಸ್ವೀಕರಿಸಿದ್ದು, ಪತ್ರಿಕೆ ಜಾಹೀರಾತು ಮೂಲಕ ಹೊರಡಿಸಿದ ಸಮನ್ಸ್ಗೆ ವಕೀಲರ ಮೂಲಕ ಉತ್ತರಿಸಲು ನಿರ್ಧರಿಸಿದ್ದಾರೆ.
ಆಸ್ತಿ ವಿವರದಲ್ಲಿ ತಪ್ಪು ಮಾಹಿತಿ ನೀಡಿ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ಇಂದು ಏಕಸದಸ್ಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲ ಕೇಶವ ರೆಡ್ಡಿ ಹಾಜರಾಗಿ, ಹೈಕೋರ್ಟ್ ಹೊರಡಿಸಿದ ಪೇಪರ್ ಪಬ್ಲಿಕೇಷನ್ ಸಿಕ್ಕಿದೆ. ಹೀಗಾಗಿ ವಕಾಲತ್ತು ವಹಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ನ್ಯಾಯಲಯ ಸೆ. 30ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.