ಬೆಂಗಳೂರು : ಪಕ್ಷದಲ್ಲಿನ ಆಂತರಿಕ ಸಮಸ್ಯೆ ಮತ್ತು ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಹಿನ್ನೆಲೆಯಲ್ಲಿ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮುಂದೂಡಲಾಗಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಎರಡನೇ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದ್ದ ಕಾರಣ ಅವರು ಬೆಂಗಳೂರಿಗೆ ಬರುವುದು ತಡವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿಲ್ಲ. ಈ ಕಾರಣ ಪಟ್ಟಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಏ.5 ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.
ಹಾಸನ ಟಿಕೆಟ್ ಗೊಂದಲ :ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ನಿನ್ನೆ ಗೌಡರ ನಿವಾಸದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಸಂಧಾನ ಸಭೆಯಲ್ಲಿ ದೇವೇಗೌಡರು ತಮ್ಮ ನಿಲುವು ವ್ಯಕ್ತಪಡಿಸಿದ ನಂತರ ಆಕ್ರೋಶಗೊಂಡ ಭವಾನಿ ಮತ್ತು ಹೆಚ್.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದರು. ಈ ಮಧ್ಯೆ ಗುರುವಾದ ಅಥವಾ ಶುಕ್ರವಾರ ಹಾಸನ ಜಿಲ್ಲೆಯ ಟಿಕೆಟ್ ಅಂತಿಮಗೊಳಿಸಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೆ.ಆರ್. ಪೇಟೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ :ಇಂದುಕೆ.ಆರ್.ಪೇಟೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ನಿನ್ನೆಯ ಸಭೆಯಲ್ಲಿ ಹೆಚ್.ಡಿ ದೇವೇಗೌಡರು ಕೆಲವು ಮಾರ್ಗದರ್ಶನ ನೀಡಿದ್ದಾರೆ. ದೇವೇಗೌಡರು ದೆಹಲಿಗೆ ಹೋಗಿದ್ದು, ದೆಹಲಿಯಿಂದ ಬಂದ ನಂತರ ಸಭೆ ಕರೆಯಲು ಹೇಳಿದ್ದೇನೆ. ಪಕ್ಷದ ಪ್ರಮುಖರನ್ನು ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಬಳಿಕ ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ ಮಾಡುತ್ತೇನೆ ಎಂದು ಹೇಳಿದರು.ಬಳಿಕ ಇವತ್ತು ಎರಡನೇ ಹಂತದ ಟಿಕೆಟ್‌ನ್ನು ಘೋಷಣೆ ಮಾಡಬೇಕು. ಅದರಿಂದ ಬೆಂಗಳೂರಿಗೆ ಹೋಗಿ ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿ ಎರಡನೇ ಹಂತದ ಟಿಕೆಟ್ ಫೈನಲ್ ಮಾಡುತ್ತೇವೆ ಎಂದರು.