ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಹೆಚ್ಚಳ ಮಾಡಿದ ಬಿಜೆಪಿ ಸರ್ಕಾರದ ಸುತ್ತ ಇದೀಗ ಪಂಚಮಸಾಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಬೇಡಿಕೆ ಆತಂಕ ಸೃಷ್ಟಿಸತೊಡಗಿದೆ. ನ್ಯಾ.ನಾಗಮೋಹನದಾಸ್ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇನೋ ಆಯಿತು. ಈಗ ಅವರ ಬೇಡಿಕೆ ಈಡೇರಿಸಿ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಪಂಚಮಸಾಲಿ ಲಿಂಗಾಯತರು ಮತ್ತು ಕುರುಬರು ಆಕ್ರೋಶಗೊಳ್ಳುತ್ತಾರೆ ಎಂಬ ವರದಿ ಬಿಜೆಪಿಗೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತಮ್ಮನ್ನು 2 ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಪಂಚಮಸಾಲಿ ಲಿಂಗಾಯತರು ಬೇಡಿಕೆ ಮುಂದಿಟ್ಟು ಹೋರಾಡುತ್ತಿದ್ದರೆ, ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮುದಾಯ ಹೋರಾಟ ಮಾಡುತ್ತಿದೆ. ಈ ಪೈಕಿ ಪಂಚಮಸಾಲಿ ಲಿಂಗಾಯತರ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ನಲವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷಕ್ಕೆ ದೊಡ್ಡ ಘಾಸಿಯಾಗಲಿದೆ ಎಂಬುದು ಈಗ ಬಿಜೆಪಿಗೆ ತಲುಪಿರುವ ವರದಿ. ಆದರೆ ಈ ವಿಷಯ ಬಿಜೆಪಿಗೆ ಎರಡು ಕಡೆಯಿಂದ ತಲೆಬಿಸಿ ತರುತ್ತಿದ್ದು, ಪಂಚಮಸಾಲಿ ಲಿಂಗಾಯತರ ಬೇಡಿಕೆಯನ್ನು ಒಪ್ಪದಿದ್ದರೂ ಕಷ್ಟ. ಒಪ್ಪಿದರೂ ಕಷ್ಟ ಎಂಬಂತಿದೆ.
ಯಾಕೆಂದರೆ ಪಂಚಮಸಾಲಿ ಲಿಂಗಾಯತರನ್ನು ಹಿಂದುಳಿದ ಪ್ರವರ್ಗ 2ಎ ಗೆ ಸೇರಿಸಿದರೆ ಈಗ ಆ ಪ್ರವರ್ಗದಲ್ಲಿರುವವರು ತಮಗೆ ಸಿಗುವ ಮೀಸಲಾತಿಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ಬೀದಿಗಿಳಿಯುತ್ತಾರೆ. ಇನ್ನು ಕುರುಬ ಸಮುದಾಯದ ಬೇಡಿಕೆ ವಿಷಯವೂ ಬಿಜೆಪಿ ಪಾಲಿಗೆ ತಲೆನೋವಾಗಿದ್ದು, ಈ ಬೇಡಿಕೆಯನ್ನು ಒಪ್ಪಿದರೂ ಕಷ್ಟ, ಒಪ್ಪದಿದ್ದರೂ ಕಷ್ಟ ಎಂಬುದು ಅದರ ಯೋಚನೆ.