ಬೆಂಗಳೂರು : ರಾಜ್ಯದಲ್ಲಿ ಕನ್ನಡ ನಾಮಫಲಕದ ಸದ್ದು ಜೋರಾಗಿರುವ ನಡುವೆಯೇ ಪೆಟ್ರೋಲ್ ಬಂಕ್ಗಳಲ್ಲಿಯೂ ಕನ್ನಡದಲ್ಲೇ ದರಪಟ್ಟಿ ಪ್ರಕಟಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಟಿಸಿದ್ದಾರೆ. ನಾಳೆಯಿಂದಲೇ ಬಂಕ್ಗಳಲ್ಲಿ ತೈಲಬೆಲೆ ದರಪಟ್ಟಿ ಕನ್ನಡದಲ್ಲಿ ಇರಲಿದೆ ಎನ್ನುವ ಭರವಸೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯ ದರಪಟ್ಟಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಪ್ರದರ್ಶನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆಗಳ ದರಪಟ್ಟಿ ಪ್ರಕಟಿಸುವಂತೆ ಮನವಿ ಬಂದಿದ್ದು, ತಕ್ಷಣವೇ ಇನ್ಮುಂದೆ ಕನ್ನಡದಲ್ಲಿಯೂ ತೈಲಬೆಲೆ ಪ್ರಕಟಿಸುತ್ತಿದ್ದು, ನಾಳೆಯಿಂದಲೇ ರಾಜ್ಯದ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿಯೂ ಕನ್ನಡದಲ್ಲೂ ದರಪಟ್ಟಿ ಪ್ರಕಟಕ್ಕೆ ಕ್ರಮ ಕೈಗೊಳ್ಳುವಂತೆ ತೈಲಕಂಪನಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕೇಂದ್ರ ಸಚಿವರು, ಕಳೆದ ಎರಡು ವರ್ಷಗಳಿಂದ ತೈಲಬೆಲೆ ಹೆಚ್ಚಳವಾಗದ ಜಗತ್ತಿನ ಏಕೈಕ ದೇಶ ಭಾರತವಾಗಿದೆ. ಆದರೂ ಒಬ್ಬ ಸಂಸದ ಹೇಳ್ತಾರೆ ಪೆಟ್ರೋಲಿಯಂ ದರ ಇಳಿದಿಲ್ಲ ಅಂತ. ಆದರೆ, ಜಗತ್ತಿನಲ್ಲಿ ಮೋದಿ ಅವರು ಒಬ್ಬರೇ ನವೆಂಬರ್‌ನಿಂದ ಮೇ ತಿಂಗಳಲ್ಲಿ ಎರಡು ಬಾರಿ ಪೆಟ್ರೋಲಿಯಂ ದರ ಇಳಿಕೆ ಮಾಡಿದ್ದಾರೆ. ತೈಲ ಉತ್ಪಾದನೆ ಕುರಿತು ನಿನ್ನೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದೇವೆ. 45 ಸಾವಿರ ಬ್ಯಾರೆಲ್ ಕಚ್ಚಾತೈಲವನ್ನ ಮೇ ಹಾಗೂ ಜೂನ್ನಲ್ಲಿ ಹೊರತೆಗೆಯುತ್ತಿದ್ದೇವೆ. ಇದು ನಮ್ಮ ಉತ್ಪಾದನೆಯ ಶೇ. 7% ರಷ್ಟಾಗಲಿದೆ. ಇದರ ಜೊತೆ ಶೇ 7%ರಷ್ಟು ಅನಿಲ ಕೂಡ ಲಭ್ಯವಾಗಲಿದೆ ಎಂದರು.
ವಿಕಸಿತ್ ಭಾರತ್ ಕಾರ್ಯಕ್ರಮ ನಡೆಯುತ್ತಿದೆ. ಕೇರಳ ಕಾರ್ಯಕ್ರಮ ಮುಗಿಸಿ ನಿನ್ನೆಯಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಹಾಸನ ಭಾಗದಲ್ಲಿ ಓಡಾಡಿ ಬಂದೆ, ಉತ್ತಮ ಚರ್ಚೆ ಕೂಡ ನಡೆದಿದೆ. ಕೇಂದ್ರದ ಯೋಜನೆಗಳನ್ನ ಜನರಿಗೆ ತಿಳಿಸುವ ಕೆಲಸ ಆಗಿದೆ. ಫಲಾನುಭವಿಗಳನ್ನ ತಲುಪುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ದೇಶಾದ್ಯಂತ 11ಕೋಟಿ ಜನ ಫಲಾನುಭವಿಗಳಿದ್ದಾರೆ. ಬಹುತೇಕರನ್ನ ತಲುಪಲಾಗ್ತಿದೆ. 2014ರಲ್ಲಿ ಗ್ಯಾಸ್ ಕನೆಕ್ಷನ್‌ಗೂ, ಈಗಿನ ಲೆಕ್ಕಕ್ಕೂ ಬಹು ಅಂತರ ಇದೆ. ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. ನಮೋ ಆಪ್‌ನಲ್ಲಿ ಸಂಪೂರ್ಣ ಮಾಹಿತಿ ಇದೆ. ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲಾಗ್ತಿದೆ. 10.50 ಕೋಟಿ ಉಜ್ವಲ ಯೋಜನೆ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗಿದೆ. ಕಟ್ಟಿಗೆ ಉರಿಸಿ ಅಡುಗೆ ಮಾಡಿ, ಆರೋಗ್ಯ ಹಾಳು ಮಾಡಿಕೊಳ್ತಿದ್ರು. ಈಗ ಅದು ತಪ್ಪಿದೆ. 11 ಕೋಟಿ ಶೌಚಾಲಯಗಳನ್ನ ನಿರ್ಮಾಣ ಮಾಡಲಾಗಿದೆ. ಸಣ್ಣ ಹುಡುಗಿಯಿಂದ ಈ ಕ್ರಾಂತಿ ಶುರುವಾಗಿದೆ ಎಂದರು.