ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಹುಲಿ ಉಗುರು ಮಾದರಿಯ ಪೆಂಡೆಂಟ್ ವಿವಾದಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಬೇಕು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿ ಎ ಶರವಣ ಆಗ್ರಹಿಸಿದ್ದಾರೆ.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹುಲಿ ಉಗುರು ಮಾದರಿಯ ಪೆಂಡೆಂಟ್ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಭರಣ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದು, ಈ ವಿವಾದಕ್ಕೆ ತೆರೆ ಎಳೆಯಬೇಕು. ಇಲ್ಲವಾದಲ್ಲಿ ಆಭರಣ ವ್ಯಾಪಾರಿಗಳು ಮುಕ್ತವಾಗಿ ವ್ಯಾಪಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯವ್ಯಾಪಿ ಚಿನ್ನಾಭರಣ ಅಂಗಡಿಗಳ ಮಾಲೀಕರು ಮತ್ತು ಅಕ್ಕಸಾಲಿಗರು ಭಯಭೀತರಾಗಿದ್ದಾರೆ ಎಂದರು.
ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ಇಂತಹ ಕಾಲಘಟ್ಟದಲ್ಲಿ ಹುಲಿ ಉಗುರು ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಸರ್ಕಾರ ಈಗಾಗಲೇ ಹಲವು ವಿಚಾರಗಳಲ್ಲಿ ವೈಫಲ್ಯ ಕಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿ ವಿಚಾರ ಧ್ವನಿಸುತ್ತಿದೆ. ಜನಪರ ಸಮಸ್ಯೆಗಳನ್ನು ಮರೆಮಾಚಲು ಇದೀಗ ಅರಣ್ಯ ಇಲಾಖೆ ಹುಲಿ ಉಗುರು ಮಾದರಿಯ ಪೆಂಡೆಂಟ್ ವಿಚಾರವನ್ನು ಕೆದಕಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದೆ. ಹಿಂದೂ ಧರ್ಮದ ಅರ್ಚಕರನ್ನು, ಸಿನಿಮಾ ತಾರೆಯರನ್ನು, ರಾಜಕಾರಣಿಗಳನ್ನು ಟಾರ್ಗೆಟ್ ಮಾಡಲಾಗಿದೆ. ವನ್ಯಜೀವಿ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸದೇ ದಿಢೀರ್ ದಾಳಿ ನಡೆಸಲಾಗುತ್ತಿದೆ ಎಂದು ದೂರಿದರು.
ಅರಣ್ಯ ಇಲಾಖೆಯ ಅಧಿಕಾರಿಗಳ ಹುಲಿ ಉಗುರು ಮಾದರಿಯ ಪೆಂಡೆಂಟ್ ಬಗ್ಗೆ ಆಭರಣ ಮಾಲೀಕರಿಗೆ ನೋಟಿಸ್ ನೀಡದೆ ಏಕಾಏಕಿ ದಾಳಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೋಟಿಸ್ ನೀಡದೇ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಬಾರದು. ಪೆಂಡೆಂಟ್ ವಿಚಾರದಲ್ಲಿ ವಜ್ರಾಭರಣ ಅಂಗಡಿಗಳ ಮಾಲೀಕರಿಗೆ ಮಾನಸಿಕ ಕಿರುಕುಳ ನೀಡಿದರೆ, ರಾಜ್ಯವ್ಯಾಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.