ಬೆಂಗಳೂರು: ಲೋನ್ ನೀಡುವ ಕಂಪನಿಗಳು ಇದೀಗ ಆ್ಯಪ್ಗಳ ಮೂಲಕವೂ ಗ್ರಾಹಕರನ್ನು ಸೆಳೆಯುತ್ತಿವೆ. ಸಾಲ ಕೊಡುವಾಗ ಇನ್ನಿಲ್ಲದ ಆಫರ್ಗಳನ್ನು ನೀಡುವ ಈ ಕಂಪನಿಗಳು ನಂತರ ಗ್ರಾಹಕರಿಗೆ ಬೆನ್ನುಬಿದ್ದು ಕಾಡುತ್ತವೆ. ಇವರ ಕಾಟಕ್ಕೆ ಬೇಸತ್ತು ಸಾಲ ಪಡೆದವರು ಇಕ್ಕಟ್ಟಿಗೆ ಸಿಲುಕಿ ಸಾವಿನ ಹಾದಿ ಹಿಡಿದ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಇಂತಹದ್ದೇ ಒಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಹೌದು, ಚೀನಾ ಮೂಲದ ಮೊಬೈಲ್ ಆ್ಯಪ್ಗಳಿಂದ ಪಡೆದಿದ್ದ ಸಾಲ ಮರುಪಾವತಿಸುವಂತೆ ಕಿರುಕುಳ ನೀಡಿದ್ದರಿಂದ ಬೇಸತ್ತು ಕಾಲೇಜಿನಲ್ಲಿ ಟಾಪರ್ ಆಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿ ತೇಜಸ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಾಲಹಳ್ಳಿಯ ಎಚ್ಎಂಟಿ ಲೇಔಟ್ನಲ್ಲಿ ವಾಸವಾಗಿದ್ದ ತೇಜಸ್ ಯಲಹಂಕದ ಖಾಸಗಿ ಮೆಕಾನಿಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನಲ್ಲಿ ಟಾಪರ್ ಆಗಿದ್ದ ತೇಜಸ್ ಸ್ನೇಹಿತ ಮಹೇಶ್ ಗಾಗಿ ಒಂದು ವರ್ಷದ ಹಿಂದೆ ಖಾಸಗಿ ಲೋನ್ ಆ್ಯಪ್ ಕಂಪನಿಗಳಿಂದ 40 ಸಾವಿರ ರೂ. ವರೆಗೆ ಸಾಲ ಪಡೆದಿದ್ದನು. ಕೆಲ ತಿಂಗಳಿಂದ ಮಹೇಶ್ ಇಎಂಐ ಪಾವತಿಸಲಿರಲಿಲ್ಲ. ಹಣ ಪಡೆದಿದ್ದ ವಿದ್ಯಾರ್ಥಿ ತೇಜಸ್ಗೆ ಸಾಲ ಪಾವತಿಸುವಂತೆ ಲೋನ್ ಆ್ಯಪ್ ಕಂಪನಿಯವರು ಪದೇ ಪದೆ ಒತ್ತಡ ಹೇರಿದ್ದರು. ಈ ಒತ್ತಡದಿಂದಾಗಿ ಮನನೊಂದಿದ್ದ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು, ನಿನ್ನೆ ಸಂಜೆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ತೇಜಸ್, 'ಅಮ್ಮ-ಅಪ್ಪ ನನ್ನನ್ನು ಕ್ಷಮಿಸಿ, ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ. ನಾನು ಮಾಡಿರುವ ಸಾಲ ತೀರಿಸಲು ಆಗುತ್ತಿಲ್ಲ. ಹೀಗಾಗಿ ಸಾಯಲು ನಿರ್ಧರಿಸಿದ್ದೇನೆ. ಥ್ಯಾಂಕ್ಸ್ ಗುಡ್ ಬೈ.. ಎಂದು ಬರೆದು ಆತ್ಯಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.