ಬೆಂಗಳೂರು:ಗಂಡನಿಗೆ ಹೆಂಡತಿಗಿಂತಲೂ ಅನ್ಯ ಯುವತಿಯರೊಂದಿಗೆ ರೀಲ್ಸ್ ಮಾಡುವುದೇ ಮುಖ್ಯ. ಮೈದುನ ಮನೆಯ ಟಿವಿಗೆ ಇಂಟರ್ನೆಟ್ ಕನೆಕ್ಟ್ ಮಾಡಿಕೊಂಡು ಅಶ್ಲೀಲ ವಿಡಿಯೋಗಳನ್ನ ವೀಕ್ಷಿಸುತ್ತಾನೆ. ಎಲ್ಲವನ್ನು ಪ್ರಶ್ನಿಸಬೇಕಾದ ಅತ್ತೆ ಮಾವ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿ ಗೃಹಿಣಿಯೊಬ್ಬರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 25 ವರ್ಷದ ಗೃಹಿಣಿಯ ನೀಡಿದ ದೂರಿನ ಅನ್ವಯ ಆಕೆಯ ಪತಿ ಪ್ರಮೋದ್ ಕುಮಾರ್, ಮೈದುನ, ಅತ್ತೆ ಹಾಗೂ ಮಾವನ ವಿರುದ್ಧ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ದೂರುದಾರ ಮಹಿಳೆಗೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಪ್ರಮೋದ್ ಕುಮಾರ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆಯಾದಾಗಿನಿಂದ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದದ ಪತಿ ಅನ್ಯ ಯುವತಿಯರೊಂದಿಗೆ ರೀಲ್ಸ್ ವಿಡಿಯೋ ಮಾಡುತ್ತಿರುತ್ತಾನೆ ಎಂದು ಆರೋಪಿಸಲಾಗಿದೆ. ಇತ್ತ ಮನೆಯಲ್ಲಿ ಎಲ್ಲರೆದುರು ಟಿವಿಯಲ್ಲಿ ಅಶ್ಲೀಲ ವಿಡಿಯೋಗಳನ್ನ ವೀಕ್ಷಿಸುವ ಆತನ ಸಹೋದರ ತನ್ನನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಪ್ರಶ್ನಿಸಿದರೆ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಯತ್ನಿಸುತ್ತಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆಗೆ 30 ಲಕ್ಷ ರೂ. ಖರ್ಚು ಮಾಡಿದ್ದ ದೂರುದಾರಳ ಪೋಷಕರು ವರದಕ್ಷಿಣೆಯಾಗಿ ಉಂಗುರ, ಬ್ರಾಸ್ಲೇಟ್ ಸೇರಿದಂತೆ ಚಿನ್ನಾಭರಣ ನೀಡಿದ್ದರಂತೆ. ಸ್ವಂತ ಮನೆಯಿದೆ ಎಂದು ನಂಬಿಸಿದ್ದ ಆರೋಪಿಯ ಕುಟುಂಬದವರು ನಂತರ ಮನೆ ಕಟ್ಟಿಸಬೇಕು, ನಿನ್ನ ತವರು ಮನೆಯಿಂದ ಹಣ ತಂದುಕೊಡು ಎಂದು ಒತ್ತಾಯಿಸುತ್ತಿದ್ದರಂತೆ. ಸಾಲದ್ದಕ್ಕೆ ಅತ್ತೆ ಮಾವ ಊಟ, ತಿಂಡಿ ನೀಡದೇ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅಲ್ಲದೇ ಗಂಡನ ಮನೆಯಲ್ಲಿ ಅನುಭವಿಸುತ್ತಿರುವ ನೋವನ್ನು ತನ್ನ ಪೋಷಕರಿಗೆ ಹೇಳಿದ್ದಕ್ಕೆ ಯಾಕೆ ಹೇಳಿದೆ ಎಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.