ಕರ್ನಾಟಕ

karnataka

By

Published : Jan 8, 2023, 11:34 AM IST

ETV Bharat / state

ಬ್ಯೂಟಿ ಪಾರ್ಲರ್​ಗೆ ಗ್ರಾಹಕನಾಗಿ ಬಂದವನಿಂದ ಯುವತಿಗೆ ನಿತ್ಯ ಕಿರುಕುಳ, ಆರೋಪಿ ಸೆರೆ

ದೈಹಿಕ ಸಂಪರ್ಕಕ್ಕೆ ಒಪ್ಪಲಿಲ್ಲ ಎಂದು ಮಹಿಳೆಯ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Samar Paramanik
ಸಮರ್ ಪರಮಾನಿಕ್-ಬಂಧಿತ ಆರೋಪಿ

ಬೆಂಗಳೂರು:ಬ್ಯೂಟಿ ಪಾರ್ಲರ್​​ಗೆ ಗ್ರಾಹಕನಾಗಿ ಬಂದು ಯುವತಿಯ ಬಾಳಿಗೆ ಮುಳ್ಳಾಗುವ ಬೆದರಿಕೆಯೊಡ್ಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಮರ್ ಪರಮಾನಿಕ್ ಸೆರೆಸಿಕ್ಕ ಆರೋಪಿ. 2019ರಲ್ಲಿ ಬ್ಯೂಟಿಷಿಯನ್ ಕೋರ್ಸ್ ಪಡೆಯಲು ಬೆಂಗಳೂರಿಗೆ ಬಂದಿದ್ದ 21 ವರ್ಷದ ಪಶ್ಚಿಮ ಬಂಗಾಳ ಮೂಲದ ಯುವತಿ ಯಲಹಂಕದ ಬ್ಯೂಟಿ ಪಾರ್ಲರ್​ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ಪಾರ್ಲರ್​ಗೆ ಸಮರ್ ಗ್ರಾಹಕನಾಗಿದ್ದ. ಇಬ್ಬರೂ ಸಹ ಪಶ್ಚಿಮ ಬಂಗಾಳ ಮೂಲದವರಾಗಿದ್ದು ಇಬ್ಬರ ನಡುವೆ ಸ್ನೇಹ ಮೂಡಿತ್ತು.

ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದ ಆರೋಪಿ ಆಕೆಗೆ ಬೇರೆಡೆ ಹೆಚ್ಚು ಸಂಪಾದನೆ ಮಾಡುವ ಕೆಲಸ ಕೊಡುವುದಾಗಿ ಡ್ಯಾನ್ಸ್ ಬಾರ್​ನಲ್ಲಿ ಕೆಲಸಕ್ಕೆ ತಳ್ಳಿದ್ದಾನೆ. ಎರಡು ಬೇರೆ ಬೇರೆ ಡ್ಯಾನ್ಸ್ ಬಾರ್​ಗಳಲ್ಲಿ ಯುವತಿಯನ್ನು ಕೆಲಸಕ್ಕೆ ಸೇರಿದ್ದ ಆತ ಲಕ್ಷಾಂತರ ರೂ ಹಣ ಪಡೆದು ಯುವತಿಯ ಮನೆಗೆ ಪ್ರತಿ ತಿಂಗಳು 20 ಸಾವಿರ ರೂ. ತಲುಪಿಸುತ್ತಿದ್ದನಂತೆ. ಸಮರ್​ನ ಕಿರುಕುಳ ತಾಳಲಾರದ ಯುವತಿ ಅನಾರೋಗ್ಯದ ನೆಪ ಹೇಳಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಳು. ಬಳಿಕ ಆಕೆಯ ಕಷ್ಟ ತಿಳಿದ ಯುವಕನೊಬ್ಬ ಮತ್ತೆ ಡ್ಯಾನ್ಸ್ ಬಾರ್​ನಲ್ಲಿ ಕೆಲಸ ಮಾಡುವುದು ಬೇಡವೆಂದು ಆಕೆಯನ್ನು ಮದುವೆಯಾಗಿದ್ದ.

ಮದುವೆಯಾಗಿ 6 ತಿಂಗಳ ಬಳಿಕ‌ ದಂಪತಿ ಬೆಂಗಳೂರಿನ ಕೊಡಿಗೇಹಳ್ಳಿಗೆ ಬಂದು ನೆಲೆಸಿದ್ದರು. ವಿಚಾರ ತಿಳಿದ ಸಮರ್ ಪುನಃ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಬೇಕು. ಇಲ್ಲವಾದಲ್ಲಿ ತನ್ನೊಂದಿಗಿದ್ದ ಖಾಸಗಿ ಫೊಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ. ಸಂತ್ರಸ್ತೆ ಯಾವುದಕ್ಕೂ ತಲೆಕೆಡಿಸಿಕೊಳ್ಳದಿದ್ದಾಗ ಫೋಟೋ ಹಾಗೂ ವೀಡಿಯೋಗಳನ್ನು ವೈರಲ್ ಮಾಡಿದ್ದ. ನಿರಂತರವಾಗಿ ಕಿರುಕುಳ ಅನುಭವಿಸಲಾರದ ಸಂತ್ರಸ್ತೆ ಈಶಾನ್ಯ ವಿಭಾಗದ ಸಿಇಎನ್ ಠಾಣಾ ಮೆಟ್ಟಿಲೇರಿದ್ದಳು ಎಂದು ಪೊಲೀಸ್‌ ಮೂಲಗಳಿಂದ ಮಾಹಿತಿ ದೊರೆತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲಸೂರು ಬಳಿ ನೆಲೆಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಹೊಸಕೋಟೆ: ಗಂಡನ ಕಿರುಕುಳ ಆರೋಪ, ಪತ್ನಿ ಆತ್ಮಹತ್ಯೆ

ABOUT THE AUTHOR

...view details