ಕರ್ನಾಟಕ

karnataka

ETV Bharat / state

ಹರ್ ಘರ್ ತಿರಂಗಾ: ರಾಷ್ಟ್ರಧ್ವಜ ಮಾರಾಟ ಜೋರು, ಖಾದಿ ವರ್ತಕರಿಗೆ ತುಸು ಬೇಜಾರು - amrit mahotsava

ಹರ್ ಘರ್ ತಿರಂಗಾ ಅಭಿಯಾನದಲ್ಲಿ ಖಾದಿಯೇತರ ಧ್ವಜಗಳ ಮಾರಾಟ ಜೋರಾಗಿದೆ. ಇದು ಖಾದಿ ಧ್ವಜ ಮಾರಾಟಗಾರರಲ್ಲಿ ಕೊಂಚ ಬೇಸರ ಉಂಟು ಮಾಡಿದೆ.

Khadi trader is not satisficed about their business
ರಾಷ್ಟ್ರಧ್ವಜ ಮಾರಾಟ ಜೋರು - ಖಾದಿ ವರ್ತಕರಿಗೆ ತುಸು ಬೇಸರ

By

Published : Aug 10, 2022, 5:38 PM IST

Updated : Aug 10, 2022, 5:49 PM IST

ಬೆಂಗಳೂರು: ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಧ್ವಜ ಮಾರಾಟ ಜೋರಾಗಿ ನಡೆಯುತ್ತಿದೆ. ಖಾದಿ ಭಂಡಾರ ಮಳಿಗೆಗಳಲ್ಲಿಯೂ ವ್ಯಾಪಾರ ಉತ್ತಮವಾಗಿ ಸಾಗುತ್ತಿದೆ. ಆದರೆ ಇದು ಖಾದಿಯೇತರ ಧ್ವಜಗಳ ಮಾರಾಟಕ್ಕೂ ಅವಕಾಶ ಸಿಕ್ಕಿರುವುದರಿಂದ ಖಾದಿ ಧ್ವಜ ಮಾರಾಟಗಾರರಲ್ಲಿ ಬೇಸರ ಉಂಟು ಮಾಡಿದೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 13 ರಿಂದ 15ರ ಸಂಜೆವರೆಗೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನದ ಕಾರಣ ರಾಷ್ಟ್ರಧ್ವಜಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಈವರೆಗೆ ಕೇವಲ ಖಾದಿ ಬಟ್ಟೆಯಿಂದ ತಯಾರಿಸಲ್ಪಟ್ಟ ರಾಷ್ಟ್ರಧ್ವಜ ಮಾರಾಟ ಮಾಡಿಕೊಂಡು ಬಂದಿದ್ದ ಖಾದಿ ಭಂಡಾರ ಮಳಿಗಳಲ್ಲಿ ಕೇವಲ ಖಾದಿ ಧ್ವಜಗಳನ್ನೇ ಮಾರಾಟ ಮಾಡಲಾಗುತ್ತಿದೆ. ಇತರೆ ಬಟ್ಟೆಗಳ ರಾಷ್ಟ್ರಧ್ವಜ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರೂ ಖಾದಿ ಮಳಿಗೆಗಳು ತಮ್ಮ ಅಸ್ಮಿತೆ ಉಳಿಸಿಕೊಂಡಿವೆ.

ರಾಷ್ಟ್ರಧ್ವಜ ಮಾರಾಟ ಜೋರು, ಖಾದಿ ವರ್ತಕರಿಗೆ ತುಸು ಬೇಜಾರು

ಖಾದಿ ಭಂಡಾರಗಳಲ್ಲಿ 250 ರೂ.ಗಳಿಂದ ರಾಷ್ಟ್ರಧ್ವಜಗಳು ಲಭ್ಯವಿದ್ದು, ಅಳತೆಗೆ ತಕ್ಕಂತೆ ಸಾವಿರಾರು ರೂ.ಗಳವರೆಗೂ ಸಿಗಲಿವೆ. ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಬಹುತೇಕ ಕಡೆ ಖಾದಿಯಿಂದ ನೇಯಲ್ಪಟ್ಟಿದ್ದ ರಾಷ್ಟ್ರಧ್ವಜವನ್ನೇ ಹಾರಿಸುತ್ತಾ ಬಂದಿದ್ದು, ಈ ಬಾರಿಯೂ ಅಲ್ಲೆಲ್ಲಾ ಖಾದಿ ತಿರಂಗವೇ ಹಾರಾಡಲಿದೆ. ಅವರೆಲ್ಲರೂ ಈ ಬಾರಿಯೂ ಖಾದಿ ಭಂಡಾರದಿಂದಲೇ ತಿರಂಗಾ ಖರೀದಿ ಮಾಡುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಖಾದಿ ಭಂಡಾರದ ವ್ಯವಸ್ಥಾಪಕ ಸಂಗಮೇಶ್ವರ ಮಠ್, ಕಳೆದ ಬಾರಿಗಿಂತಲೂ ಎರಡು ಪಟ್ಟು ಹೆಚ್ಚು ವಹಿವಾಟು ನಡೆಸಿದ್ದೇವೆ. ಈವರೆಗೂ 25 ಲಕ್ಷ ರೂ. ಮೊತ್ತದ ಧ್ವಜಗಳ ಮಾರಾಟವಾಗಿದೆ. ಇನ್ನೂ ಸಮಯವಿದೆ. ವಹಿವಾಟು ಮತ್ತಷ್ಟು ಹೆಚ್ಚಲಿದೆ. ಆದರೆ ನಮ್ಮ ನಿರೀಕ್ಷೆ ಬೇರೆಯೇ ಇತ್ತು. ಅಮೃತ ಮಹೋತ್ಸವ ಕಾರಣಕ್ಕೆ ಹೆಚ್ಚಿನ ಮಾರಾಟದ ನಿರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಕೇಂದ್ರ ಸರ್ಕಾರ ಧ್ವಜದ ನಿಯಮದಲ್ಲಿ ತಿದ್ದುಪಡಿ ತಂದಿದ್ದರಿಂದ ಹತ್ತಿಯೇತರ ವಸ್ತ್ರಗಳಿಂದಲೂ ಧ್ವಜ ತಯಾರಿಗೆ ಅನುಮತಿ ಸಿಕ್ಕಿದೆ. ಅದು ಕಡಿಮೆ ಬೆಲೆಗೂ ಲಭ್ಯವಾಗುತ್ತಿದೆ. ಹೀಗಾಗಿ ನಮಗೆ ನಿರೀಕ್ಷೆಯಂತೆ ಧ್ವಜಗಳ ಮಾರಾಟ ಮಾಡಲಾಗುತ್ತಿಲ್ಲ ಎಂದರು.

ಚಿಕ್ಕಪೇಟೆಯ ಅಂಗಡಿ ಮುಂಗಟ್ಟುಗಳಲ್ಲಿಯೂ ಧ್ವಜಗಳ ಮಾರಾಟ ನಡೆಸಲಾಗುತ್ತಿದೆ. ಹತ್ತಿ ಬಟ್ಟೆ ಹೊರತುಪಡಿಸಿ ಇತರೆ ವಸ್ತ್ರಗಳಿಂದ ತಯಾರಾದ ಧ್ವಜಗಳ ಮಾರಾಟ ಭರ್ಜರಿಯಾಗಿದೆ. ಅಂಚೆ ಕಚೇರಿಗಳಲ್ಲಿಯೂ ಧ್ವಜಗಳ ಮಾರಾಟವಿದೆ. ಬಿಜೆಪಿ ಕಚೇರಿಯಲ್ಲಿಯೂ ಧ್ವಜಗಳ ಮಾರಾಟಕ್ಕೆ ಮಳಿಗೆಯನ್ನು ತೆರೆಯಲಾಗಿದ್ದು, 25 ಲಕ್ಷ ಧ್ವಜಗಳನ್ನು ಬೆಂಗಳೂರಿಗೆ ವಿತರಿಸಲಾಗುತ್ತಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 75 ಲಕ್ಷ ನಿವಾಸಗಳ ಮೇಲೆ ಧ್ವಜಾರೋಹಣ ನೆರವೇರುವ ಮೂಲಕ ಹರ್ ಘರ್ ತಿರಂಗಾ ಅಭಿಯಾನದ ಭರ್ಜರಿ ಯಶಸ್ಸಿಗೆ ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ.

ಇದನ್ನೂ ಓದಿ:ಪಾಲಿಸ್ಟರ್ ಬಟ್ಟೆಗಳಿಂದ ರಾಷ್ಟ್ರ ಧ್ವಜ ತಯಾರಿ: ಆತಂಕದಲ್ಲಿ ಬೆಂಗೇರಿ‌ ಖಾದಿ ಗ್ರಾಮೋದ್ಯೋಗ ಸಂಸ್ಥೆ ಸಿಬ್ಬಂದಿ

ವಾರ್ಡ್​ಗಳಲ್ಲಿ ಮನೆ ಮನೆಗೆ ತೆರಳಿ ಧ್ವಜಗಳನ್ನು ನೀಡಲಾಗುತ್ತಿದೆ. 20-25 ರೂ.ಗಳನ್ನು ಪಡೆದು ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಎಂಜಿ ರಸ್ತೆಯ ವಾಣಿಜ್ಯ ಮಳಿಗೆಗಳಿಗೆ ಉಚಿತವಾಗಿ ಧ್ವಜ ವಿತರಣೆ ಮಾಡಲು ಬೆಂಗಳೂರು ವರ್ತಕರ ಸಂಘ ನಿರ್ಧರಿಸಿದೆ.

Last Updated : Aug 10, 2022, 5:49 PM IST

ABOUT THE AUTHOR

...view details