ಬೆಂಗಳೂರು:ಗುತ್ತಿಗೆದಾರರ ನಿವಾಸದಲ್ಲಿ ಪತ್ತೆಯಾದ ಕೋಟಿ ಕೋಟಿ ನಗದು ಹಣ ಪ್ರಕರಣವನ್ನು ಇಡಿ ಮತ್ತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಡಾಲರ್ಸ್ ಕಾಲೊನಿಯಲ್ಲಿರುವ ಖಾಸಗಿ ನಿವಾಸ ದವಳಗಿರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯಲ್ಲಿ ಹಣ ಸಿಕ್ಕಿದ್ದ ಪ್ರಕರಣದಲ್ಲಿ ತನಿಖೆ ಬಳಿಕ ಹಣದ ಮೂಲ ಗೊತ್ತಾಗಲಿದೆ. ಚುನಾವಣೆಗೆ ಹಣ ಸಂಗ್ರಹ ಮಾಡಿರೋದು ನಿಜ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ನವರು ಚುನಾವಣೆಗೆ ಹಣ ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇಡಿ ಮತ್ತು ಸಿಬಿಐ ತನಿಖೆ ಮಾಡಿದರೆ ವಾಸ್ತವಾಂಶ ಹೊರಗೆ ಬರಲಿದೆ. ಹಾಗಾಗಿ ನಾನೂ ಕೂಡ ಇಡಿ ತನಿಖೆಗೆ ಆಗ್ರಹ ಮಾಡುತ್ತೇನೆ ಎಂದರು.
ರಾಯಚೂರು ಜಿಲ್ಲೆ ಪ್ರವಾಸ ಮುಗಿಸಿ ಬರುತ್ತಿದ್ದೇನೆ. ಎಲ್ಲೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ಪಂಪ್ ಸೆಟ್ ಇರುವ ರೈತರು ಸಂಕಷ್ಟದಲ್ಲಿದ್ದಾರೆ. ಮತ್ತೊಂದು ಕಡೆ ಬೋರ್ವೆಲ್ನಿಂದ ಅಲ್ಪ ಸ್ವಲ್ಪ ಬೆಳೆ ಉಳಿಸೋಣ ಎನ್ನುವ ಚಿಂತನೆಯಲ್ಲಿದ್ದಾರೆ. ಆದರೆ, ವಿದ್ಯುತ್ ಪೂರೈಕೆಯಾಗದೇ ಸಂಪೂರ್ಣ ಬೆಳೆ ನಾಶವಾಗಿದೆ. ಸರ್ಕಾರ ಕೂಡಲೇ ಕೊನೇ ಪಕ್ಷ ಬೋರ್ವೆಲ್ಗಳಿಗೆ ವಿದ್ಯುತ್ ಕೊಡುವ ಕೆಲಸ ಮಾಡಬೇಕು. ಇದರಿಂದ ರೈತ ಉಳಿಯಬಹುದು. ಆ ದಿಕ್ಕಿನಲ್ಲಿ ಸರ್ಕಾರ ಯೋಚನೆ ಮಾಡಬೇಕು ಎಂದು ಬಿಎಸ್ವೈ ಒತ್ತಾಯಿಸಿದರು.