ಬೆಂಗಳೂರು: ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ “ಸಮಗ್ರ ಮಾಹಿತಿಯ ಪ್ರಥಮ ಕೈಪಿಡಿ” ಬಿಡುಗಡೆ ಮಾಡಲಾಯಿತು. ಕರ್ನಾಟಕದ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಬಾಧಿಸುವ ಕ್ಯಾಸನೂರು ಕಾಡಿನ ಕಾಯಿಲೆ (ಮಂಗನ ಕಾಯಿಲೆ)ಯ ವಿವಿಧ ಅಂಶಗಳನ್ನು ಒಳಗೊಂಡ “ಕಾರ್ಯಾಚರಣೆಯ ಕೈಪಿಡಿ”( Operational Manual Kyasanur Forest Disease)ಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬಿಡುಗಡೆ ಮಾಡಿದರು.
ಕೈಪಿಡಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿದ್ಧಪಡಿಸಿದ್ದು, ಮಂಗನ ಕಾಯಿಲೆ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ದೇಶದಲ್ಲೇ ಪ್ರಥಮ ಕೈಪಿಡಿ ಇದಾಗಿದೆ. ಈ ಕೈಪಿಡಿಯು ರಾಜ್ಯದ ಮಂಗನ ಕಾಯಿಲೆ ಪೀಡಿತ ಜಿಲ್ಲೆಗಳಲ್ಲದೇ, ಕರ್ನಾಟಕ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡಿಗೂ ಸಹ ಉಪಯುಕ್ತವಾಗಲಿದೆ.
ಈ ಕೈಪಿಡಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರ ಮಟ್ಟದ ಸಿಬ್ಬಂದಿ ಅನುಷ್ಠಾನಗೊಳಿಸುವ ಸರ್ವೇಕ್ಷಣೆ, ಚಿಕಿತ್ಸೆ ಮತ್ತು ನಿರ್ವಹಣೆ, ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳು (ಲಸಿಕಾ ಕಾರ್ಯಕ್ರಮವನ್ನು ಒಳಗೊಂಡಂತೆ), ಮೇಲ್ವಿಚಾರಣೆ ಹಾಗೂ ಉಸ್ತುವಾರಿ ಕುರಿತು ಮಾರ್ಗಸೂಚಿಗಳನ್ನೂ ನೀಡಲಾಗಿದೆ.