ಕರ್ನಾಟಕ

karnataka

ETV Bharat / state

ಶಂಕಿತ ಉಗ್ರನ ಮನೆಯಲ್ಲಿ ಪತ್ತೆಯಾದವು 4 ಹ್ಯಾಂಡ್ ಗ್ರೆನೇಡ್: ರಾಜಧಾನಿಯಲ್ಲಿ‌ ದೊರಕಿದ್ದು ಇದೇ ಮೊದಲು! - ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಶಂಕಿತ ಉಗ್ರನ ಮನೆಯಲ್ಲಿ ನಾಲ್ಕು ಜೀವಂತ ಹ್ಯಾಂಡ್​ ಗ್ರೆನೇಡ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಜಾಯೇದ್ ತಬ್ರೆಸ್ ಹಾಗೂ  ಟಿ. ನಜೀರ್
ಆರೋಪಿ ಜಾಯೇದ್ ತಬ್ರೆಸ್ ಹಾಗೂ ಟಿ. ನಜೀರ್

By

Published : Jul 20, 2023, 8:35 PM IST

ಬೆಂಗಳೂರು :ನಗರದ ಜನನಿಬಿಡ ಪ್ರದೇಶಗಳಲ್ಲಿ ಶಂಕಿತ ಭಯೋತ್ಪಾದಕರು ಉಗ್ರ ಕೃತ್ಯವೆಸಗಲು ಸಂಗ್ರಹಿಸಿ ಬಚ್ಚಿಟ್ಟಿದ್ದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಹೀಗಾಗಿ, ಇಲ್ಲಿನ ಸ್ಥಳೀಯರಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರಕರಣದ ಐದನೇ ಆರೋಪಿ ಜಾಯೇದ್ ತಬ್ರೆಸ್​ನ ಕೊಡಿಗೆಹಳ್ಳಿಯ ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್​ಗಳನ್ನ ಸಿಸಿಬಿ ವಶಪಡಿಸಿಕೊಂಡಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರುವುದು ತಿಳಿದುಬಂದಿದೆ. 2021 ರಲ್ಲಿ ಉಪ್ಪಿನಂಗಡಿ ಬಳಿ ಐದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದವು. ನೆಲದಡಿ ದೊರೆತಿದ್ದ 40 ವರ್ಷದಷ್ಟು ಹಳೆಯ ಗ್ರೆನೇಡ್​ಗಳು ಇವಾಗಿದ್ದವು. ನಂತರ 2022ರಲ್ಲಿ ಅಥಣಿ ಬಳಿಯ ಶಾಲೆಯೊಂದರಲ್ಲಿ ಒಂದು ಹ್ಯಾಂಡ್ ಗ್ರೆನೇಡ್​ ಪತ್ತೆಯಾಗಿತ್ತು. ವಿದ್ಯಾರ್ಥಿಗಳು ಚೆಂಡು ಎಂದು ಆಟವಾಡುವಾಗ ನಿರ್ಜೀವ ಸ್ಥಿತಿಯಲ್ಲಿ ಗ್ರೆನೇಡ್ ಇದಾಗಿದ್ದವು. ಇದಾದ ಬಳಿಕ ರಾಜಧಾನಿಯಲ್ಲೇ ಭಾರಿ ಪ್ರಮಾಣದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.

ಶಂಕಿತ ಉಗ್ರನ ಮನೆಯಲ್ಲಿ ಪತ್ತೆಯಾದ 4 ಹ್ಯಾಂಡ್ ಗ್ರೆನೇಡ್

ಹ್ಯಾಂಡ್ ಗ್ರೆನೇಡ್ ಎಂದರೇನು?: ಡೆಟೋನೇಟರ್ ತಂತ್ರಜ್ಞಾನದಿಂದ ತಯಾರಾಗುವ ಸ್ಪೋಟಕ ಇದಾಗಿದೆ. ಸೇಫ್ಟಿ ಪಿನ್​ ಅಥವಾ ಕಾಟರ್ ಪಿನ್​ನಿಂದ ನಿಯಂತ್ರಿಸಲ್ಪಡುತ್ತೆ. ಹ್ಯಾಂಡ್ ಗ್ರೆನೇಡ್​ಗಳಲ್ಲಿ ಹಲವು ವಿಧಗಳಿವೆ. ರಾಸಾಯನಿಕ ಗ್ರೆನೇಡ್ ಗಳು, ಸ್ಟನ್​ ಗನ್ ಗ್ರೆನೇಡ್​ಗಳು, ಭಾರಿ ಸ್ಪೋಟಕದ ಗ್ರೆನೇಡ್​ಗಳಿವೆ. ಆದರೆ ವಿದೇಶಿ ಗ್ರೆನೇಡ್​ಗಳಾದ Dam51, mk3a2 ಗ್ರೆನೇಡ್​ಗಳು ಭಾರಿ ಪ್ರಮಾಣದ ಸ್ಪೋಟವನ್ನ ಮಾಡುತ್ತವೆ. 40 ಮೀಟರ್​ನಿಂದ 200 ಮೀಟರ್​ವರೆಗೂ ಈ ಗ್ರೆನೇಡ್​ಗಳು ಪರಿಣಾಮ ಬೀರಲಿವೆ. ಹೀಗಾಗಿ ಈಗ ಸಿಕ್ಕಿರುವ ಗ್ರೆನೇಡ್​ಗಳು ಯಾವ ಮಾದರಿಯವು ಎಂಬುದರ ಬಗ್ಗೆ ಸಿಸಿಬಿ ತನಿಖಾ ತಂಡ ತನಿಖೆ ಮುಂದುವರೆಸಿದೆ.

ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಶಂಕಿತ ಉಗ್ರರಿಗೆ ಇಸ್ಲಾಂ ಮೂಲಭೂತವಾದದ ಬಗ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟಿ. ನಜೀರ್ ಬೋಧನೆ ಮಾಡಿದ್ದ. ಈತ ಪ್ರಕರಣದ ರೂವಾರಿ ಎಂಬುವುದು ತನಿಖೆ ವೇಳೆ ಕಂಡುಬಂದಿದ್ದು, ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಪರಿಗಣಿಸಲು ಸಿಸಿಬಿ ನಿರ್ಧರಿಸಿದೆ. ಶಂಕಿತರ ಹೇಳಿಕೆ ಆಧರಿಸಿ ಬಾಡಿ ವಾರಂಟ್​ ಮೇರೆಗೆ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆಯಲು ಸಿದ್ದತೆ ನಡೆಸುತ್ತಿದೆ.

ಶಂಕಿತರಿಗೆ ತರಬೇತಿ ನೀಡುತ್ತಿದ್ದ ನಜೀರ್​: 2010 ರಿಂದ ಜೈಲಿನಲ್ಲಿರುವ ನಜೀರ್, ತಮ್ಮ ಸಮುದಾಯದ ವಿಚಾರಣಾಧೀನ ಕೈದಿಗಳಿಗೆ ಧರ್ಮದ ಬೋಧನೆ ಮಾಡುತ್ತಿದ್ದ. ಊಟ, ಕಾಫಿಯ ಸಮಯದಲ್ಲಿ ಬ್ಯಾರಕ್​ನಲ್ಲಿ ಒಂದೆ ಕಡೆ ಸೇರುವಾಗ ಜಿಹಾದಿ ಬಗ್ಗೆ ಸಾರಿ ಹೇಳುತ್ತಿದ್ದ. ಯಾವ ರೀತಿ ಉಗ್ರ ಕೃತ್ಯ ನಡೆಸಬೇಕೆಂಬುದರ ಬಗ್ಗೆ ನಜೀರ್ ಶಂಕಿತರಿಗೆ ತರಬೇತಿ ನೀಡುತ್ತಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿನ್ನೆಯಷ್ಟೇ ಬಂಧಿಖಾನೆ ಇಲಾಖೆಯ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ನಜೀರ್ ಇರುವ ಬ್ಯಾರಕ್​ನಲ್ಲಿ ಶೋಧ ನಡೆಸಲಾಗಿದ್ದು, ಸ್ಯಾಟಲೈಟ್ ಫೋನ್​​ ಸೇರಿದಂತೆ ಯಾವುದೇ ರೀತಿಯ ವಸ್ತುಗಳು ಪತ್ತೆಯಾಗಿಲ್ಲ. ಜೈಲಿನಲ್ಲಿ ಆತನ ಸಂಪರ್ಕದಲ್ಲಿದ್ದ ವಿಚಾರಣಾಧೀನ ಕೈದಿಗಳನ್ನ ಪ್ರತ್ಯೇಕಿಸಲಾಗಿರುವ ಬಗ್ಗೆ ತಿಳಿದುಬಂದಿದೆ.

ಇದನ್ನೂ ಓದಿ:Suspected terrorists case: ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ ವಶಕ್ಕೆ: ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ

ABOUT THE AUTHOR

...view details