ಕರ್ನಾಟಕ

karnataka

ETV Bharat / state

ವಿಧಾನಪರಿಷತ್​ನಲ್ಲಿ ಅರ್ಧ ದಿನ ನೆರೆ ಬಗ್ಗೆ ಸುದೀರ್ಘ ಚರ್ಚೆ.. ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವಿಪಕ್ಷಗಳು.. - karnataka politics news

ಇಂದು ನಡೆದ ಅಧಿವೇಶನದಲ್ಲೂ ನೆರೆ ಪರಿಹಾರವೇ ಸದ್ದು ಮಾಡಿದೆ. ಇದರಿಂದ ವಿಧಾನಪರಿಷತ್​ನ ಅರ್ಧ ದಿನದ ಕಲಾಪ ವಾಗ್ವಾದದಲ್ಲೇ ನಡೆದಿದೆ.

ವಿಧಾನಪರಿಷತ್​ನಲ್ಲಿ ಅರ್ಧ ದಿನ ನೆರೆ ಸಮಸ್ಯೆಯದ್ದೇ ಸುದೀರ್ಘ ಚರ್ಚೆ...

By

Published : Oct 11, 2019, 4:45 PM IST

ಬೆಂಗಳೂರು: ವಿಧಾನಪರಿಷತ್​ನಲ್ಲಿ ನೆರೆ ಸಮಸ್ಯೆ ಸಂಬಂಧ ಮುಂದುವರಿದ ಚರ್ಚೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಸದಸ್ಯ ಎನ್ ಎಸ್ ಭೋಸರಾಜ್ ಮಾತನಾಡಿ, ನೆರೆ ಸಂತ್ರಸ್ತರಿಗೆ 5ರ ಬದಲು 10 ಲಕ್ಷ ರೂ. ಪರಿಹಾರ ಮೊತ್ತ ಕೊಡಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕೆಂದರು. ಸದಸ್ಯ ಕೆ ಟಿ ಶ್ರೀಕಂಠೇಗೌಡ ಮಾತನಾಡಿ, ಇಂದು ನೆರೆ ಹಾವಳಿ ಬಗ್ಗೆ ಮಾತನಾಡಬೇಕಾದ ಸ್ಥಿತಿ ಎದುರಾಗಬಹುದಾಗಿದ್ದು ವಿಷಾದನೀಯ ಎಂದರು.

ನೆರೆಯಿಂದ 90 ಮಂದಿ ಸತ್ತಿದ್ದಾರೆ. 8-10 ಮಂದಿ ಕಣ್ಮರೆಯಾಗಿದ್ದಾರೆ. 20 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇಡೀ ಬದುಕು ನಾಶವಾಗಿದೆ. ಈಗ ಸಚಿವ ಸಿ ಟಿ ರವಿ ಅವರಿದ್ದರೆ ಮನವರಿಕೆ ಮಾಡಿಕೊಡುತ್ತಿದ್ದೆ ಎಂದು ಅವರು ಹೇಳಿದಾಗ ಸದನದಲ್ಲಿ ಸಚಿವರ ಅನುಪಸ್ಥಿತಿ, ಸಚಿವರ ಸಂಖ್ಯೆಯ ಕೊರತೆ ವಿಚಾರ ಗದ್ದಲ ಎಬ್ಬಿಸಿತು.

ಅಧಿಕಾರಿಗಳ ಅನುಪಸ್ಥಿತಿ ಬಗ್ಗೆಯೂ ಇದೇ ಸಂದರ್ಭದಲ್ಲಿ ಎಸ್ ಆರ್ ಪಾಟೀಲ್ ಪ್ರಸ್ತಾಪ ಮಾಡಿ, ತಲೆ ಎಣಿಕೆ ಮಾಡಲು ಮುಂದಾದರು. ಅದನ್ನು ಸಚಿವ ಶ್ರೀನಿವಾಸ ಪೂಜಾರಿ ಖಂಡಿಸಿದರು. ಎದ್ದು ನಿಲ್ಲಿಸಿ ಎಣಿಸುವುದು ಸರಿಯಲ್ಲ ಎಂದರು. ಇತಿಹಾಸದಲ್ಲಿ ಎಲ್ಲಿಯೂ ಹಾಜರಾತಿ ಪರಿಶೀಲನೆ ಮಾಡಿಲ್ಲ ಎಂದಾಗ ಸಭಾ ನಾಯಕರಿಗೂ ಪ್ರತಿಪಕ್ಷ ನಾಯಕರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಗದ್ದಲದಲ್ಲಿ ಎರಡೂ ಪಕ್ಷದ ಸದಸ್ಯರು ವಾಗ್ವಾದ ನಡೆಸಿದರು. ಈ ಮಧ್ಯೆ ಸಚಿವ ಸಿ ಟಿ ರವಿ ಅವರೂ ಆಗಮಿಸಿದರು. ಶ್ರೀಕಂಠೇಗೌಡರು ಮಾತು ಮುಂದುವರಿಸಿ ನಷ್ಟದ ವಿವರ ಒದಗಿಸಿದರು.

ಪ್ರಧಾನಿ ಆಗಿರುತ್ತಿದ್ದರು:
ನೆರೆಯಿಂದ ಹಲವು ಮಂದಿ ಬದುಕು ಕಳೆದುಕೊಂಡಿದ್ದಾರೆ. ಎಲ್ಲಾ ಸರಿಯಾಗಿದ್ದರೆ ಅವರ ಬದುಕು ಹಸನಾಗುತ್ತಿತ್ತು. ಇವರಲ್ಲಿ ಯಾವುದೋ ಒಬ್ಬ ಬಾಲಕ ಪ್ರಧಾನಿ ಕೂಡ ಆಗಬಹುದಿತ್ತು. ಇಂದಿನ ನಷ್ಟ ತುಂಬಿಕೊಡುವುದು ಅಸಾಧ್ಯ. ಕಳೆದ ಬಾರಿ ಮಡಿಕೇರಿಯಲ್ಲಿ ಆದ ನಷ್ಟಕ್ಕೆ ಮನೆ ಕಟ್ಟಿದ್ದೇವೆ ಎಂದು ಶ್ರೀಕಂಠೇಗೌಡರು ಹೇಳಿದಾಗ, ಮನೆ ಕಟ್ಟಾಗಿಲ್ಲ ಎಂದು ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು.

ಶೇ.95 ರಷ್ಟು ನಿರ್ಮಾಣ ಪೂರ್ಣವಾಗಿದೆ ಎಂದಾಗ ಬಿಜೆಪಿ ಸದಸ್ಯರ ಆವೇಶ ಹೆಚ್ಚಾಯಿತು. ಈ ಆವೇಶ ಪರಿಹಾರ ಕಾರ್ಯದಲ್ಲಿ ತೋರಿಸಿ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಆಗ್ರಹಿಸಿದರು. ಎಲ್ಲಾ ಪಕ್ಷದ ಸದಸ್ಯರು ಎದ್ದು ನಿಂತು ಪರಸ್ಪರ ವಾಗ್ದಾಳಿ ನಡೆಸಿದರು.

ನಾನು ಹೇಳಿದ ಮಾತು ಮಾಹಿತಿ ಬಗ್ಗೆ ತನಿಖೆಗೆ ಸದನ ಸಮಿತಿ ನೇಮಿಸಿ, ಸಣ್ಣ ವ್ಯತ್ಯಾಸ ಇದ್ದರೂ ಶಾಸಕ ಸ್ಥಾನ ತ್ಯಜಿಸಿ ಹೋಗುತ್ತೇನೆ ಎಂದು ಶ್ರೀಕಂಠೇಗೌಡ ಹೇಳಿದರು. ಅದಕ್ಕೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಆಯನೂರು ಮಂಜುನಾಥ್, ನೀವು ರಾಜೀನಾಮೆ ವಿಚಾರ ಮಾತನಾಡಬೇಡಿ, ಆ ಅವಕಾಶ ನಿಮಗಿಲ್ಲ. ನಿಮ್ಮ ನಾಯಕರಾದ ಹೆಚ್ ಡಿ ರೇವಣ್ಣ ಅವರೇ ರಾಜೀನಾಮೆ ನೀಡುತ್ತೇನೆ ಎಂಬ ಮಾತನ್ನು ಉಳಿಸಿಕೊಂಡಿಲ್ಲ, ನೀವೇನ್ರಿ ಉಳಿಸಿಕೊಳ್ಳೋದು ಎಂದರು.

ಶ್ರೀಕಂಠೇಗೌಡರು ಮಾತು ಮುಂದುವರಿಸಿ, ಸಾಯುವವನಿಗೆ ಸೂಕ್ತ ಸಮಾಧಾನ ಸಿಕ್ಕಿಲ್ಲ. ವ್ಯವಸಾಯ ಮಾಡೋದು ತಪ್ಪಾ? ನಿರಾಶ್ರಿತರಿಗೆ ಸೂಕ್ತ ಪರಿಹಾರ ಕೊಡಿ, ನಾವು ಇಲ್ಲಿ ರಾಜಕಾರಣ ಮಾಡಲ್ಲ. ಶಾಲಾ ಮಕ್ಕಳ ಬದುಕು ಹಾಳಾಗಿದೆ. ರಸ್ತೆ, ನೀರು, ಮೂಲಸೌಕರ್ಯ ಕಲ್ಪಿಸುವ ಕಾರ್ಯ ಆಗಿಲ್ಲ. ಸಾವಿರಾರು ಕೋಟಿ ನಷ್ಟವಾಗಿದೆ. ಸಂತ್ರಸ್ತರಿಗೆ ಸರಿಯಾಗಿ ‌ಪರಿಹಾರ ನೀಡಿ ಎಂದರು. ನಷ್ಟಕ್ಕೆ ಸರಿಯಾದ ಲೆಕ್ಕ ಕೊಡಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದಾಗ, ಇದಕ್ಕೊಂದು ಸಮಿತಿ ನೇಮಿಸಿ ನನ್ನನ್ನು ಸದಸ್ಯನಾಗಿ ಸೇರಿಸಿ, ಆಗ ಲೆಕ್ಕ ಕೊಡುತ್ತೇವೆ ಎಂದರು. ಸಚಿವ ಸಿ ಟಿ ರವಿ ಮಾತನಾಡಿ, ಸೂಕ್ತ ಸಲಹೆ ನೀಡಿ, ಆರೋಪಕ್ಕೆ ಸೀಮಿತವಾಗಬೇಡಿ ಎಂದರು.

ಶ್ರೀಕಂಠೇಗೌಡರ ಮಾತನ್ನು ಸವಾಲಾಗಿ ಸ್ವೀಕರಿಸಲ್ಲ. ಕಳಕಳಿ ಎಂದು ಪರಿಗಣಿಸುತ್ತೇವೆ. ಸವಾಲು ಅನ್ನುವುದು ಚುನಾವಣೆ ವಿಚಾರದಲ್ಲಿ ಬರುತ್ತದೆ. ಆ ಸವಾಲನ್ನು ನಾವು ಗೆದ್ದಿದ್ದೇವೆ ಎಂದು ಸಿ ಟಿ ರವಿ ಹೇಳಿದಾಗ ಗದ್ದಲವಾಯಿತು. ಹೃದಯದಿಂದ ಹೇಳಿದರೆ ಕಳಕಳಿ, ಧಿಮಾಕಿನಿಂದ ಮಾತನಾಡಿದರೆ ಅದು ಸವಾಲು ಎಂದು ರವಿ ವಿವರಿಸಿದರು.

ಬಿಜೆಪಿ ಸದಸ್ಯ ವಿಜಯೇಂದ್ರ ಮಾತನಾಡಿ ಮಡಿಕೇರಿ ಹಾಗೂ ಸುತ್ತಲಿನ ಭಾಗದ ಸಮಸ್ಯೆ ವಿವರಿಸಿದರು. ಸದಸ್ಯರಾದ ರಾಘವೇಂದ್ರ ಇಟಗಿ ಮಾತನಾಡಿ, ಅನೇಕ ಭಾಗದಲ್ಲಿ ಊರಿಗೆ ಊರೇ ಸ್ಥಳಾಂತರಗೊಳ್ಳಬೇಕಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಹಿಂದೆ ಬಿಎಸ್​ವೈ ಸಿಎಂ ಆಗಿದ್ದಾಗ ಕೂಡ ಸಮಸ್ಯೆ ಆಗಿತ್ತು. ಈಗಲೂ ಆಗಿದೆ. ಅಂದು ಸಮಸ್ಯೆ ಆದಲ್ಲಿ ಇಂದೂ ಆಗಿದೆ. ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ಆಗಬೇಕು. ಪರಿಹಾರ ಕಾರ್ಯ ವಿಳಂಬ ಆಗುತ್ತಿದೆ. ಆದಷ್ಟು ತ್ವರಿತವಾಗಿ ಕಾರ್ಯ ಸಾಗಬೇಕು ಎಂದರು.

ಸಚಿವ ಆರ್. ಅಶೋಕ್ ಮಾತನಾಡಿ, 2 ಲಕ್ಷಕ್ಕೂ ಹೆಚ್ಚು ಮಂದಿಗೆ 10 ಸಾವಿರ ರೂ. ನೀಡುವ ಕಾರ್ಯ ಆಗಿದೆ. 50 ಸಾವಿರ, 1 ಲಕ್ಷ ರೂ. ಪರಿಹಾರ ಮೊತ್ತ ಕೂಡ ಶೇ.60 ರಷ್ಟು ಮಂದಿಗೆ ಆರ್​ಟಿಜಿಎಸ್ ಮೂಲಕ ಕಳಿಸಿದ್ದೇವೆ. ಹಣ ನೀಡಿಕೆ ಆಗುತ್ತಿದೆ, ಇನ್ನೂ ತ್ವರಿತಗೊಳಿಸುತ್ತೇವೆ. ನಿನ್ನೆ ಒಂದು ದಿನವೇ 240 ಕೋಟಿ ರೂ ನೀಡಿದ್ದೇವೆ. ಇನ್ನೊಂದು ವಾರದಲ್ಲಿ ಎಲ್ಲರಿಗೂ ಒದಗಿಸುತ್ತೇವೆ ಎಂದರು.

ಪರಿಹಾರವನ್ನು ಆರ್​ಟಿಜಿಎಸ್ ಮೂಲಕ ನೀಡುವ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಡೆ ಇಟ್ಟಿದ್ದಾರೆ. ಈ ಪ್ರಯತ್ನ ದೇಶದಲ್ಲೇ ಮೊದಲು ಎಂದು ಬಿಜೆಪಿ ಸದಸ್ಯರು ಹೇಳಿದಾಗ ಮತ್ತೊಮ್ಮೆ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಾಕಷ್ಟು ಮಂದಿ ತಮ್ಮ ದಾಖಲೆ ಕಳೆದುಕೊಂಡಿದ್ದಾರೆ. ಅದಕ್ಕೆ ಸೂಕ್ತ ಕ್ರಮ ಕೈಗೊಂಡು ತ್ವರಿತವಾಗಿ ದಾಖಲೆ ಮರಳಿ ಒದಗಿಸುವ ಕಾರ್ಯ ಆಗಬೇಕು ಎಂದು ಮನವಿ ಮಾಡಿಕೊಂಡರು.

ABOUT THE AUTHOR

...view details