ಬೆಂಗಳೂರು:ಕ್ರಿಸ್‌ಮಸ್ ಹಬ್ಬಕ್ಕೆ ಶುಭ ಕೋರಲು ಹೋದಾಗ ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತರ ನಡುವೆ ನಡೆದ ಜಗಳದ ವೇಳೆ ಚಾಕುವಿನಿಂದ ಸ್ನೇಹಿತನನ್ನೇ ಕೊಲೆಗೈದ ಆರೋಪದಡಿ ಇಬ್ಬರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ಹಾಗೂ ಅಜಯ್ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸೆಂಬರ್ 24ರಂದು ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಫಿಟೌನ್ ವ್ಯಾಪ್ತಿಯ ಎಂ.ವಿ.ಲೇಔಟ್‌ನಲ್ಲಿ ವಿನೂಷ್ ಎಂಬಾತನ ಕೊಲೆಯಾಗಿತ್ತು.
ವಿವರ:
ಬೈಯಪ್ಪನಹಳ್ಳಿಯ ಸಂತೋಷ್ ಅಲಿಯಾಸ್ ಸಿಂಬು ಎಂಬಾತ ಹಬ್ಬಕ್ಕೆ ಕೆಲವು ಸ್ನೇಹಿತರಿಗೆ ವಿಶ್ ಮಾಡಲು ಮರ್ಫಿ ಟೌನ್ ಬಳಿಯ ಎಂ.ವಿ.ಲೇಔಟ್‌ಗೆ ಬಂದಿದ್ದ. ಈ ವೇಳೆ ಅಲ್ಲಿಯೇ ಪರಿಚಯವಾದ ವಿನೂಷ್ ಗಲಾಟೆ ಮಾಡಿಕೊಳ್ಳುತ್ತಿದ್ದ. ಸಂತೋಷ್ ಜಗಳ ಬಿಡಿಸಲು ಮುಂದಾಗಿದ್ದಾನೆ. ಆದ್ರೆ, ವಿನೂಷ್ ನೀನ್ಯಾರು ಜಗಳ ಬಿಡಿಸೋಕೆ? ಅಂತ ಸಂತೋಷ್ ಮೇಲೆಯೆ ಹಲ್ಲೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಸಂತೋಷ್ ರಾತ್ರಿ ವೇಳೆ ಸ್ನೇಹಿತ ಅಜಯ್‌ನನ್ನು ಕರೆದುಕೊಂಡು ಎಂ.ವಿ.ಲೇಔಟ್‌ನಲ್ಲಿರುವ ವಿನೂಷ್ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.