ಬೆಂಗಳೂರು : ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಾಗಲೇ ಮನೆಗೆ ನುಗ್ಗಿ ನಿವೃತ್ತ ಯೋಧಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಗಂಟೆಗಳಲ್ಲಿ ಐವರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬಾಬು ಮತ್ತು ಈತನ ಸಹಚರರಾದ ಮುರಳಿ, ಗಜೇಂದ್ರ ನಾಯಕ್, ರೇವಣ್ಣ ನಾಯಕ್ ಹಾಗೂ ರಾಜೇಂದ್ರ ಎಂಬುವರೇ ಬಂಧಿತ ಆರೋಪಿಗಳು.
ಏ.13ರಂದು ಗೌತಮ್ ನಗರದ ಮನೆಯೊಂದರಲ್ಲಿ ವಾಸವಿದ್ದ ನಿವೃತ್ತ ಯೋಧ ಜ್ಯೂಡ್ ತೆಡ್ಡಾಸ್ ಆಲಿಯಾಸ್ ಸುರೇಶ್ (60) ಅವರನ್ನು ಕೊಲೆ ಮಾಡಲಾಗಿತ್ತು. ಹಣದ ಆಸೆಗೆ ಆರೋಪಿ ಬಾಬು ತನ್ನ ಸಹಚರರೊಂದಿಗೆ ಸೇರಿಕೊಂಡು ಮನೆಗೆ ನುಗ್ಗಿ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಈಗ ಖಚಿತ ಮಾಹಿತಿಯಂತೆ ಐವರೂ ಆರೋಪಿಗಳನ್ನು ಆಂಧ್ರದಲ್ಲಿ ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ಪರಿಚಯ :ಸೇನೆಯಲ್ಲಿದ್ದ ಸುರೇಶ್ ಕೆಲ ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಹಲವು ವರ್ಷಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದ ಅವರು ಒಂಟಿಯಾಗಿ ವಾಸವಿದ್ದರು. ಈ ನಡುವೆ ಕೆಲ ತಿಂಗಳ ಹಿಂದೆ ತಾಯಿ ಅನಾರೋಗ್ಯ ನಿಮಿತ್ತ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಬಾಬುವಿನ ಪರಿಚಯವಾಗಿದೆ.
ಆತ್ಮೀಯತೆ ತಂದ ಕುತ್ತು :ನಂತರ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿದೆ. ಅಲ್ಲಿಂದ ಬಾಬುನೇ ಸುರೇಶ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಉಸ್ತುವಾರಿ ವಹಿಸಿಕೊಂಡಿದ್ದ. ಇತ್ತೀಚೆಗೆ ತಾಯಿ ಅಗಲಿದ್ದರು. ಆದರೂ, ಸ್ನೇಹದ ಸೋಗಿನಲ್ಲಿ ಆಗಾಗ ಸುರೇಶ್ ಮನೆಗೆ ಬಾಬು ಬರುತ್ತಿದ್ದ. ಇದೇ ವೇಳೆ ಆಸ್ತಿ ವಿಚಾರವಾಗಿ ನನಗೆ ಸುಮಾರು 40 ಲಕ್ಷ ರೂ. ಹಣ ಬರಬೇಕಿದೆ ಹಾಗೂ ಬೆಂಗಳೂರಿನಲ್ಲಿ ಫ್ಲ್ಯಾಟ್ ತೆಗೆದುಕೊಳ್ಳಬೇಕಿದೆ ಎಂದು ಬಾಬುವಿನ ಬಳಿ ಸುರೇಶ್ ಹೇಳಿಕೊಂಡಿದ್ದ ಎನ್ನಲಾಗಿದೆ.