ಬೆಂಗಳೂರು :ವಿಧಾನಸಭೆಯಲ್ಲಿ ಇಂದು ಹಲಾಲ್ ವಿವಾದ ಪ್ರತಿಧ್ವನಿಸಿತು. ಚುನಾವಣಾ ಸುಧಾರಣೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದ ವೇಳೆ ಆಹಾರ ಪದ್ಧತಿ ಬಗ್ಗೆ ಪ್ರಸ್ತಾಪವಾಯಿತು. ಆಗ ಹಿಜಾಬ್ ಆಯ್ತು, ಜಾತ್ರೆಗೆ ನಿರ್ಬಂಧ ವಿಚಾರ ಆಯ್ತು. ಈಗ ಹಲಾಲ್ ವಿವಾದ ಶುರುವಾಗಿದೆ. ಯುಗಾದಿ ಹಬ್ಬದಲ್ಲಿ ನಾವು ಹಲಾಲ್ ಮಾಡಿದ್ದಾರೋ ಇಲ್ಲವೋ ನೋಡುವುದಿಲ್ಲ. ನಾವು ಮಾಂಸದಂಗಡಿಯಿಂದ ತರುವ ಮಾಂಸವನ್ನು ಪೂಜೆಗೆ ಇಡಲ್ಲ. ಯಾಕೆ ಇಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಆಹಾರ ಪದ್ಧತಿ ಅವರವರ ಹಕ್ಕು : ಅಲ್ಲದೇ ಇಂತಹ ವಿಚಾರವನ್ನು ಮಾಧ್ಯಮಗಳು ಬಿತ್ತರಿಸಬಾರದು. ವಾಟ್ಸ್ಆ್ಯಪ್ ಸಂದೇಶ ನೋಡಿದರೆ ಭಯ ಆಗುತ್ತದೆ. ಯಾರೋ ನಮ್ಮ ಹಿಂದೂ ಸಮಾಜದ ತಿಳಿಗೇಡಿಗಳು ಇದನೆಲ್ಲಾ ಮಾಡಿದ್ದಾರೆ. ಸಮಾಜದಲ್ಲಿ ಕಲುಷಿತ ವಾತಾವರಣ ತರುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಡಿ ಎಂದು ಸದನದಲ್ಲಿ ವಾಟ್ಸ್ಆ್ಯಪ್ ಸಂದೇಶವನ್ನು ಓದಿದರು.
ಈ ವೇಳೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಚಿವ ಆರ್. ಅಶೋಕ್, ಆಹಾರಪದ್ದತಿ ಅವರವರ ಹಕ್ಕು. ಯಾರು ಕೂಡ ಯಾರ ಮೇಲೆ ಬಲವಂತ ಮಾಡುವಂತಿಲ್ಲ. ಇದನ್ನು ಸರ್ಕಾರವು ಸಹಿಸುವುದಿಲ್ಲ ಎಂದರು. ಆಗ ಹೆಚ್ಡಿಕೆ ಮಾತನಾಡಿ, ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಹಲಾಲ್ ವಿವಾದ ದೊಡ್ಡ ಸಂಘರ್ಷವನ್ನು ಉಂಟು ಮಾಡುತ್ತಿದೆ. ದಯವಿಟ್ಟು ಬಿಜೆಪಿ ಸದಸ್ಯರು ಬೇಸರಪಟ್ಟುಕೊಳ್ಳಬಾರದು.
ನಾವು ನೀವೇ ಮಾಡಿದ್ದೀರಿ ಎಂದು ಹೇಳುವುದಿಲ್ಲ. ಆದರೆ, ಮೂರು ದಿನಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷ ಕೆಲವು ಮುಖಂಡರ ಹೇಳಿಕೆಗಳು, ಸಂಘಟನೆಗಳ ಹೇಳಿಕೆಗಳನ್ನು ಗಮನಿಸಿದರೆ ನಾವೇನು ನಾಗರಿಕ ಸಮಾಜದಲ್ಲಿದ್ದೇವೆಯೇ ಇಲ್ಲವೇ ಎಂಬ ಆತಂಕ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯತ್ನಾಳ್ ಕಾಲೆಳೆದ ಕಾಂಗ್ರೆಸ್ ಶಾಸಕರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಒಂದು ಕಡೆಯದು ಮಾತ್ರ ಹೇಳುತ್ತಿದ್ದಾರೆ. ಎರಡೂ ಕಡೆಯದ್ದನ್ನು ಹೇಳಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದರು. ಆಗ ಕಾಂಗ್ರೆಸ್ ಶಾಸಕರು, ಅವರು ಬಿಜೆಪಿಯವರಿಗೆ ಮಾತ್ರ ಹೇಳುತ್ತಿಲ್ಲ. ನೀವೇಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುತ್ತೀರಿ ಎಂದು ಕಾಲೆಳೆದರು.
ಅಶೋಕ್ ಅವರು ಏಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರು ಬಿಜೆಪಿ ಅಥವಾ ಹಿಂದೂಗಳ ಬಗ್ಗೆ ಮಾತ್ರ ಮಾತನಾಡಬಾರದು. ಈ ರಾಜ್ಯದಲ್ಲಿ ಬೇರೆ ಬೇರೆ ಧರ್ಮದವರು ಏನೇನು ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಬೆಳಕು ಚೆಲ್ಲಿ ಎಂದು ಒತ್ತಾಯಿಸಿದರು.