ಬೆಂಗಳೂರು:ಎಲ್‌ಸಿಎ ತೇಜಸ್ ಟ್ವಿನ್ ಸೀಟರ್ ಹಗುರ, ಎಲ್ಲಾ ಹವಾಮಾನದಲ್ಲಿ ಬಹುಪಾತ್ರ ನಿರ್ವಹಿಸುವ 4.5 ಪೀಳಿಗೆಯ ವಿಮಾನ. ಇದನ್ನು ವಾಯುಪಡೆಯ ತರಬೇತಿ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಅವಶ್ಯಕತೆಯ ಸಂದರ್ಭದಲ್ಲಿ ಯುದ್ಧಕ್ಕೆ ಕೂಡ ಬಳಕೆಯಾಗಲಿದೆ. ಈ ಯುದ್ಧವಿಮಾನ ನವೀನ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನಗಳಿಂದ ಸ್ಥಿರತೆ, ಕುಶಲತೆ, ಕ್ವಾಡ್ರಾಪ್ಲೆಕ್ಸ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್, ಸುಧಾರಿತ ಗಾಜಿನ ಕಾಕ್‌ಪಿಟ್, ಸಂಯೋಜಿತ ಡಿಜಿಟಲ್ ಏವಿಯಾನಿಕ್ಸ್ ಸಿಸ್ಟಮ್‌ಗಳು ಮತ್ತು ಏರ್‌ಫ್ರೇಮ್‌ಗಾಗಿ ಸುಧಾರಿತ ಸಂಯೋಜಿತ ಸಾಮಗ್ರಿಗಳ ಸಂಯೋಜನೆಯಾಗಿದೆ.
ಎಲ್.ಸಿ.ಎ ಅವಳಿ ಆಸನಗಳ ಯುದ್ಧವಿಮಾನದ ಉತ್ಪಾದನೆಯು ಇಂತಹ ಸಾಮರ್ಥ್ಯವನ್ನು ಸೃಷ್ಟಿಸಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ ಮತ್ತು ವಿವಿಧ ದೇಶಗಳ ರಕ್ಷಣಾ ಪಡೆಗಳಲ್ಲಿ ಕೂಡ ಕಾರ್ಯನಿರ್ವಹಿಸಲಿದೆ. ಇದು ಸರ್ಕಾರದ "ಆತ್ಮನಿರ್ಭರ್ ಭಾರತ್" ಉಪಕ್ರಮಕ್ಕೆ ಮತ್ತೊಂದು ಗರಿಯಾಗಿದೆ.
ಎಚ್‌ಎಎಲ್ ಸಿದ್ಧಪಡಿಸಿದ ಮೊದಲ ಎಲ್‌ಸಿಎ ತೇಜಸ್ ಟ್ವಿನ್ ಸೀಟರ್ ಯುದ್ಧ ವಿಮಾನವನ್ನು ಇಂದು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು. ಎಚ್‌ಎಎಲ್ ಆವರಣದಲ್ಲಿ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಸಮ್ಮುಖದಲ್ಲಿ ಹಸ್ತಾಂತರ ಪ್ರಕ್ರಿಯೆ ನೆರವೇರಿತು.
ಕಿಕ್ಕಿರಿದ ಪ್ರೇಕ್ಷಕರ ಮುಂದೆ ಅವಳಿ ಆಸನಗಳ ಎಲ್‌ಸಿಎ ಅನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಸಚಿವ ಅಜಯ್ ಭಟ್, "ಈ ದಿನ ಸ್ವಾವಲಂಬನೆಯ ಪ್ರತೀಕ. ಐತಿಹಾಸಿಕ ಸಂದರ್ಭದ ಭಾಗವಾಗಲು ನಾನು ಹೆಮ್ಮೆಪಡುತ್ತೇನೆ. ರಕ್ಷಣೆಯಲ್ಲಿ ಸ್ವದೇಶಿ ಉತ್ಪಾದನೆಯನ್ನು ಮುನ್ನಡೆಸುತ್ತಿರುವ ಎಚ್‌ಎಎಲ್ ಕಾರ್ಯಕ್ಕೆ ಅಭಿನಂದಿಸುತ್ತೇನೆ" ಎಂದು ಹೇಳಿದರು.