ಬೆಂಗಳೂರು: ಹೆಚ್ಎಎಲ್ ಸಂಸ್ಥೆಯ ಆಡಳಿತ ಮಂಡಳಿ ಸಲ್ಲಿಸಿದ ರಿಟ್ ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಕಟ್ಟುನಿಟ್ಟಿನ ಮುನ್ಸೂಚನೆ ನೀಡಿತ್ತು. ನ್ಯಾಯಾಲಯದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ HAL ನೌಕರರ ಸಂಘ ಪ್ರತಿಭಟನೆ ಕೈಬಿಟ್ಟಿದೆ.
ಹೈಕೋರ್ಟ್ ಮಧ್ಯಂತರ ಆದೇಶ ಹಿನ್ನೆಲೆ: ಕೆಲಸಕ್ಕೆ ಹಾಜರಾದ HAL ನೌಕರರು
ಹೆಚ್ಎಎಲ್ ಆಡಳಿತ ಮಂಡಳಿ ಈ ಹಿಂದೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಮಧ್ಯಂತರ ಆದೇಶ ನೀಡಿ ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಿತ್ತು.
ಹೆಚ್ಎಎಲ್ ನೌಕರರ ಸಂಘದ ಅಧ್ಯಕ್ಷ ಸೂರ್ಯದೇವ ಚಂದ್ರಶೇಖರ್ ಇಂದು ಬೆಳಿಗ್ಗೆ 6.30 ಕ್ಕೆ ಹೆಚ್ಎಎಲ್ ಬಸ್ ಸ್ಟ್ಯಾಂಡ್ ಬಳಿ ಪ್ರತಿಭಟನೆಯಲ್ಲಿ ತೊಡಗಿದ್ದ ಸಂಸ್ಥೆಯ ಎಲ್ಲಾ ನೌಕರರಿಗೆ ಧನ್ಯವಾದ ಸಲ್ಲಿಸಿ ಕೆಲಸಕ್ಕೆ ಮರಳಲು ಸೂಚನೆ ನೀಡಿದ್ದಾರೆ.
ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಸಿಬ್ಬಂದಿ ಕೆಲಸಕ್ಕೆ ಹಿಂತಿರುಗಿದ್ದಾರೆ. ಆದರೆ ಈ ವಿವಾದಕ್ಕೆ ಇನ್ನೂ ಪೂರ್ಣ ತೆರೆ ಬಿದ್ದಿಲ್ಲ. ಸಂಸ್ಥೆ ಆಡಳಿತ ಮಂಡಳಿ ವೇತನ ಪರಿಷ್ಕರಣೆ ಕುರಿತು ಹೈಕೋರ್ಟ್‌ಗೆ ವಿವರಣೆ ನೀಡಲಿದೆ. ಬಳಿಕ ನೌಕರರ ಸಂಘವೂ ತಮ್ಮ ಬೇಡಿಕೆಗಳನ್ನು ಮುಂದಿಡಲಿದೆ. ಇದಾದ ನಂತರವೇ ವಾದ ಹಾಗೂ ಪ್ರತಿವಾದವನ್ನು ಆಲಿಸಿ ಘನ ನ್ಯಾಯಾಲಯ ಅಂತಿಮ ತೀರ್ಪು ನೀಡಲಿದೆ.