ಬೆಂಗಳೂರು: 2020ರ ಹಜ್ ಯಾತ್ರೆಯ ಆಯ್ಕೆ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರಭು ಚವ್ವಾಣ್, ಹಜ್ ಕಮಿಟಿ ಅಧ್ಯಕ್ಷ ರೋಷನ್ ಬೇಗ್ ಮತ್ತು ರಾಜ್ಯ ಹಜ್ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಆನ್‌ಲೈನ್ ಲಾಟರಿ ಮೂಲಕ ಹಜ್ ಯಾತ್ರಿಗಳನ್ನು ಆಯ್ಕೆ ಮಾಡಲಾಯಿತು. ರಾಜ್ಯದಿಂದ ಈ ಸಲ ಹಜ್ ಯಾತ್ರೆಗೆ 9,823 ಅರ್ಜಿಗಳು ಬಂದಿದ್ದು, ಹಜ್ ಯಾತ್ರೆಗೆ ಆನ್‌ಲೈನ್ ಲಾಟರಿ ಮೂಲಕ 6,243 ಯಾತ್ರಿಕರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ ಕಲಬುರ್ಗಿ, ಬೀದರ್, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳ ಯಾತ್ರಿಕರು ಹೈದರಾಬಾದ್ಗೆ ಹೋಗಿ ನಂತರ ಮೆಕ್ಕಾಕ್ಕೆ ಹೋಗಬೇಕು. ಕಲ್ಬುರ್ಗಿಯಿಂದ ನೇರವಾಗಿ ಮೆಕ್ಕಾಕ್ಕೆ ಹೋಗುವ ವ್ಯವಸ್ಥೆ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡುತ್ತೇನೆಂದು ಭರವಸೆ ನೀಡಿದರು. ಅಲ್ಲದೆ ರೋಷನ್ ಬೇಗ್ ಮನವಿಯನ್ನು ಪರಿಗಣಿಸಿ, ₹ 5 ಕೋಟಿಯನ್ನು ಹಜ್ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದರು.