ಕರ್ನಾಟಕ

karnataka

ETV Bharat / state

ಹಜ್​ ಸಮಿತಿ ಅಧ್ಯಕ್ಷ, ಸದಸ್ಯರ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಹೈಕೋರ್ಟ್ - ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ

ಕರ್ನಾಟಕ ರಾಜ್ಯ ಹಜ್‌ ಸಮಿತಿಯ ಅಧ್ಯಕ್ಷರು ಸೇರಿದಂತೆ ಹಲವು ಸದಸ್ಯರು ಮೂರು ವರ್ಷಕ್ಕಿಂತ ಅಧಿಕ ಅವಧಿಗೆ ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

high court
ಹೈಕೋರ್ಟ್

By

Published : Aug 19, 2023, 7:45 PM IST

ಬೆಂಗಳೂರು: ಕರ್ನಾಟಕ ರಾಜ್ಯ ಹಜ್‌ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ಮೂರು ವರ್ಷಕ್ಕಿಂತ ಅಧಿಕ ಅವಧಿಗೆ ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಧ್ಯಕ್ಷರ ಅವಧಿ ಸದಸ್ಯತ್ವದೊಂದಿಗೆ ಸೇರಿರುತ್ತದೆ. ಒಮ್ಮೆ ಅವರ ಸದಸ್ಯತ್ವದ ಅವಧಿ ಮುಗಿದರೆ ಅದರ ಜೊತೆ ಅಧ್ಯಕ್ಷರ ಅವಧಿಯೂ ತನ್ನಿಂದ ತಾನೇ ಕೊನೆಗೊಳ್ಳುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ರಾಜ್ಯ ಹಜ್‌ ಸಮಿತಿಯ ಅಧ್ಯಕ್ಷ ರಫುದ್ದೀನ್‌ ಕಾಚೆರಿವಾಲ ಸೇರಿದಂತೆ ಹಲವು ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಹಜ್​ ಸಮಿತಿಗೆ ಅಧ್ಯಕ್ಷರ ಹುದ್ದೆಗೆ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಲಾಗಿರುತ್ತದೆ ಮತ್ತು ಆ ಅವಧಿ ಸಮಿತಿ ಅಧಿಕಾರವಹಿಸಿಕೊಂಡ ದಿನದಿಂದ ಲೆಕ್ಕಕ್ಕೆ ಬರುತ್ತದೆ. ಹಜ್‌ ಸಮಿತಿ ಕಾಯಿದೆ ಸೆಕ್ಷನ್‌ 21(1) ಪ್ರಕಾರ, ಸಮಿತಿಗೆ ಹೊಸದಾಗಿ ಅಧ್ಯಕ್ಷರು ಮತ್ತು ಸದಸ್ಯರು ಆಯ್ಕೆಯಾದ ನಂತರ 45 ದಿನಗಳಲ್ಲಿ ಸರ್ಕಾರ ಮೊದಲ ಸಭೆ ಕರೆಯಬೇಕು. ಆ ಸಭೆ ಕರೆಯಲು ವಿಳಂಬವಾಗಿದೆ ಎನ್ನುವ ಕಾರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ವಿಸ್ತರಿಸಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ ಅಧ್ಯಕ್ಷರ ಅವಧಿ ಮೂರು ವರ್ಷ, ಆದರೆ ಅಧ್ಯಕ್ಷರ ನೇಮಕಕ್ಕೆ ಒಂದು ವರ್ಷ ತಡವಾಗಿ ಚುನಾವಣೆ ನಡೆದಿದೆ. ಹಾಗಾಗಿ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಲಾಗಿದೆ. ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಹಜ್‌ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗೆ ಮೂರು ವರ್ಷದ ಅವಧಿ ನಿಗದಿಪಡಿಸಲಾಗಿದ್ದು, ಅದರ ವಿಸ್ತರಣೆಗೆ ಅವಕಾಶವಿಲ್ಲ. ಅರ್ಜಿದಾರರ ಮನವಿ ಕಾನೂನು ಬಾಹಿರವಾಗಿದೆ ಮತ್ತು ವಿಸ್ತರಣೆಗೆ ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ ಏನು?ಅರ್ಜಿದಾರರು ಕರ್ನಾಟಕ ರಾಜ್ಯ ಹಜ್‌ ಸಮಿತಿಗೆ 2020ರ ಜ.20ರಂದು ಮೂರು ವರ್ಷಗಳ ಅವಧಿಗೆ ನಾಮ ನಿರ್ದೇಶನಗೊಂಡಿದ್ದರು. ನಂತರ ಹೈಕೋರ್ಟ್‌ ಖುಸ್ರು ಖುರೇಶಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ನಿರ್ದೇಶನ ನೀಡದ ಹಿನ್ನೆಲೆಯಲ್ಲಿ 2021ರ ಜು.7ಕ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ತಡವಾಗಿ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಅವರ ಅವಧಿಯನ್ನೂ ಸಹ 2024ರ ಜು.6ರ ವರೆಗೆ ವಿಸ್ತರಣೆ ಮಾಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ:ಕರಾವಳಿ ತೀರ ಸವೆತ ಸಮಸ್ಯೆ: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮೊರೆ ಹೋಗುವಂತೆ ಹೈಕೋರ್ಟ್ ನಿರ್ದೇಶನ

ABOUT THE AUTHOR

...view details